ಬ್ಯಾಟಿಂಗ್ ರ್ಯಾಂಕಿಂಗ್ | ಭಾರೀ ಕುಸಿತ ಕಂಡ ರೋಹಿತ್ ಶರ್ಮಾ
ರೋಹಿತ್ ಶರ್ಮಾ | PTI
ಹೊಸದಿಲ್ಲಿ : ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ನಾಟಕೀಯ ಕುಸಿತ ಕಂಡಿದ್ದಾರೆ. ಬುಧವಾರ ಬಿಡುಗಡೆಯಾಗಿರುವ ರ್ಯಾಂಕಿಂಗ್ ನಲ್ಲಿ 2018ರ ಡಿಸೆಂಬರ್ ನಂತರ ಕೆಳ ಸ್ಥಾನಕ್ಕೆ ಜಾರಿದ್ದಾರೆ.
ಶರ್ಮಾ ಅವರು 9 ಸ್ಥಾನ ಕಳೆದುಕೊಂಡು 15ನೇ ಸ್ಥಾನದಿಂದ 24ನೇ ಸ್ಥಾನಕ್ಕೆ ಕುಸಿದಿದ್ದಾರೆ ಎಂದು ವಿಸ್ಡನ್ ವರದಿ ಮಾಡಿದೆ.
ಸುಮಾರು 6 ವರ್ಷಗಳ ನಂತರ ರೋಹಿತ್ ರ್ಯಾಂಕಿಂಗ್ ನಲ್ಲಿ ಕುಸಿತ ಕಂಡಿದ್ದಾರೆ. ಈ ಹಿಂದೆ 2018ರ ಡಿಸೆಂಬರ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಮೆಲ್ಬರ್ನ್ನಲ್ಲಿ ಔಟಾಗದೆ 63 ಹಾಗೂ 5 ರನ್ ಗಳಿಸಿದ ನಂತರ 44ನೇ ಸ್ಥಾನಕ್ಕೆ ಜಾರಿದ್ದರು.
2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವಳಿ ಶತಕ(176 ಹಾಗೂ 127 ರನ್)ಗಳಿಸಿದ ನಂತರ ಶರ್ಮಾ ಅವರು ರ್ಯಾಂಕಿಂಗ್ ನಲ್ಲಿ 17ನೇ ಸ್ಥಾನಕ್ಕೇರಿದ್ದರು. ಆ ನಂತರ ಅವರು 2021ರಲ್ಲಿ 23ನೇ ಸ್ಥಾನಕ್ಕೆ ಇಳಿದಿದ್ದರು. 2021ರ ಫೆಬ್ರವರಿ 27ರಿಂದ 2023ರ ಫೆ.21ರ ತನಕ ಅಗ್ರ-10ರಲ್ಲಿ ಸ್ಥಾನ ಉಳಿಸಿಕೊಂಡಿದ್ದರು.
ಸ್ವದೇಶದಲ್ಲಿ ಇತ್ತೀಚೆಗೆ ಬಾಂಗ್ಲಾದೇಶ ಹಾಗೂ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಕಳಪೆ ಪ್ರದರ್ಶನ ನೀಡಿರುವ ಕಾರಣ ರೋಹಿತ್ ಶರ್ಮಾ ರ್ಯಾಂಕಿಂಗ್ ನಲ್ಲಿ ಕುಸಿತ ಕಂಡಿದ್ದಾರೆ.
ವಿರಾಟ್ ಕೊಹ್ಲಿ 6 ಸ್ಥಾನ ಕೆಳಜಾರಿ 14ನೇ ಸ್ಥಾನದಲ್ಲಿ ಹಾಗೂ ರಿಷಭ್ ಪಂತ್ 5 ಸ್ಥಾನ ಕಳೆದುಕೊಂಡು 11ನೇ ಸ್ಥಾನಕ್ಕೆ ಕುಸಿದಿದ್ದಾರೆ.