ರಣಜಿ ಪುನರಾರಂಭ: ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಸೇರ್ಪಡೆ
ರೋಹಿತ್ ಶರ್ಮಾ | PC : PTI
ಹೊಸದಿಲ್ಲಿ : 2024-25ರ ರಣಜಿ ಟ್ರೋಫಿ ಋತುವಿನ ಎರಡನೇ ಹಂತದ ಆರಂಭಕ್ಕಿಂತ ಮೊದಲು ಭಾರತದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ತರಬೇತಿಗಾಗಿ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ.
ಮುಂಬೈ ತಂಡವು ಜಮ್ಮು-ಕಾಶ್ಮೀರದ ವಿರುದ್ಧ ಜನವರಿ 23ರಂದು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್(ಬಿಕೆಸಿ)ನಲ್ಲಿ ಆರಂಭವಾಗಲಿರುವ ಆರನೇ ಸುತ್ತಿನ ರಣಜಿ ಪಂದ್ಯಕ್ಕೆ ತಯಾರಿ ಆರಂಭಿಸಿದೆ.
ತನ್ನ ದೇಶಿ ಕ್ರಿಕೆಟ್ನ ಸಹ ಆಟಗಾರರೊಂದಿಗೆ ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಎರಡು ಗಂಟೆಗಳ ಕಾಲ ಅಭ್ಯಾಸ ನಡೆಸಿದರು. ಮುಂಬೈ ತಂಡದ ಮುಖ್ಯ ಕೋಚ್ ಓಂಕಾರ್ ಸಾಳ್ವಿ ಮಾರ್ಗದರ್ಶನದಲ್ಲಿ ವಾರಗಳ ಕಾಲ ಇದು ಮುಂದುವರಿಯುವ ನಿರೀಕ್ಷೆ ಇದೆ.
ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯಕ್ಕೆ ಇನ್ನಷ್ಟೇ ಮುಂಬೈ ತಂಡವನ್ನು ಖಚಿತಪಡಿಸಬೇಕಾಗಿದೆ. ರಣಜಿ ಟೂರ್ನಿಯ ಲೀಗ್ ಹಂತದ ಉಳಿದಿರುವ 2 ಪಂದ್ಯಗಳಲ್ಲಿ ಕನಿಷ್ಠ ಒಂದರಲ್ಲಿ ಸ್ವತಃ ಲಭ್ಯವಿರುವ ನಿಟ್ಟಿನಲ್ಲಿ ರೋಹಿತ್ ಅಭ್ಯಾಸ ನಡೆಸಲು ನಿರ್ಧರಿಸಿದ್ದಾರೆ.
ರಾಷ್ಟ್ರೀಯ ತಂಡದಲ್ಲಿ ಭಾಗವಹಿಸದೇ ಇದ್ದಾಗ ಅಥವಾ ಗಾಯದಿಂದ ಚೇತರಿಸಿಕೊಂಡಿರುವಾಗ ರಣಜಿ ಟ್ರೋಫಿಯಲ್ಲಿ ಭಾಗವಹಿಸುವ ಕುರಿತು ಟೀಮ್ ಇಂಡಿಯಾ ಆಟಗಾರರು ಆದ್ಯತೆ ನೀಡಬೇಕೆಂದು ಬಿಸಿಸಿಐ ನೀಡಿರುವ ಸಲಹೆಯಲ್ಲಿ ವಿನಂತಿಸಿದೆ.
ರೋಹಿತ್ ಇತ್ತೀಚೆಗಿನ ದಿನಗಳಲ್ಲಿ ಕಳಪೆ ಫಾರ್ಮ್ನಲ್ಲಿದ್ದು, ಆಸ್ಟ್ರೇಲಿಯದಲ್ಲಿ ಈಚೆಗೆ ಕೊನೆಗೊಂಡಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ವೇಳೆ 3 ಟೆಸ್ಟ್ ಪಂದ್ಯಗಳಲ್ಲಿ ಕೇವಲ 31 ರನ್ ಗಳಿಸಿದ್ದರು.
ರೋಹಿತ್ ಶರ್ಮಾರ ಅನುಭವವನ್ನು ಬಳಸಿಕೊಂಡು ರಣಜಿಯ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ನಿರ್ಣಾಯಕ ಗೆಲುವನ್ನು ಸಂಪಾದಿಸುವ ವಿಶ್ವಾಸದಲ್ಲಿ ಮುಂಬೈ ತಂಡವಿದೆ.