ಕ್ರಿಸ್ ಗೇಲ್ ಐತಿಹಾಸಿಕ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

ರೋಹಿತ್ ಶರ್ಮಾ | PTI
ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ನ್ಯೂಝಿಲ್ಯಾಂಡ್ ವಿರುದ್ಧ ರವಿವಾರ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಕೇವಲ 15 ರನ್ ಗಳಿಸಿ ಔಟಾಗಿದ್ದರೂ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ರೋಹಿತ್ ಕೆಲವೇ ಹೊತ್ತು ಕ್ರೀಸ್ನಲ್ಲಿದ್ದರೂ 17ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಿಡಿಸಿದರು. ಮ್ಯಾಟ್ ಹೆನ್ರಿಗೆ ವಿಕೆಟ್ ಒಪ್ಪಿಸಿದರು. ಹೆನ್ರಿ ಬೌಲಿಂಗ್ನಲ್ಲಿ ಏಕೈಕ ಸಿಕ್ಸರ್ ಸಿಡಿಸಿರುವ ರೋಹಿತ್ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿರುವ ವೆಸ್ಟ್ಇಂಡೀಸ್ ದಂತಕತೆ ಕ್ರಿಸ್ ಗೇಲ್ ದಾಖಲೆಯನ್ನು (64 ಸಿಕ್ಸರ್) ಸರಿಗಟ್ಟಿದರು.
48 ಸಿಕ್ಸರ್ ಸಿಡಿಸಿರುವ ಗ್ಲೆನ್ ಮ್ಯಾಕ್ಸ್ವೆಲ್ 3ನೇ ಸ್ಥಾನದಲ್ಲಿದ್ದಾರೆ. ಆ ನಂತರ ಡೇವಿಡ್ ಮಿಲ್ಲರ್(45 ಸಿಕ್ಸರ್)ಅವರಿದ್ದಾರೆ.
ಇದೀಗ ರೋಹಿತ್ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ. ರೋಹಿತ್ ಸದ್ಯ 340 ಸಿಕ್ಸರ್ಗಳನ್ನು ಸಿಡಿಸಿದ್ದು, ಪಾಕಿಸ್ತಾನದ ಶಾಹಿದ್ ಅಫ್ರಿದಿಗಿಂತ ಹಿಂದಿದ್ದಾರೆ. ಅಫ್ರಿದಿ ಒಟ್ಟು 351 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಐಸಿಸಿ ಏಕದಿನ ಟೂರ್ನಿಗಳಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರರು
1-ರೋಹಿತ್ ಶರ್ಮಾ: 41 ಪಂದ್ಯಗಳಲ್ಲಿ 64 ಸಿಕ್ಸರ್
2-ಕ್ರಿಸ್ ಗೇಲ್: 52 ಪಂದ್ಯಗಳಲ್ಲಿ 64 ಸಿಕ್ಸರ್
3-ಗ್ಲೆನ್ ಮ್ಯಾಕ್ಸ್ವೆಲ್: 34 ಪಂದ್ಯಗಳಲ್ಲಿ 48 ಸಿಕ್ಸರ್
4-ಡೇವಿಡ್ ಮಿಲ್ಲರ್-33 ಪಂದ್ಯಗಳಲ್ಲಿ 45 ಸಿಕ್ಸರ್
5-ಸೌರವ್ ಗಂಗುಲಿ: 34 ಪಂದ್ಯಗಳಲ್ಲಿ 42 ಸಿಕ್ಸರ್