ಅತಿ ಹೆಚ್ಚು ಬಾರಿ ಟಾಸ್ ಸೋಲು | ಬ್ರಿಯಾನ್ ಲಾರಾ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

PC : PTI
ದುಬೈ: ನಾಯಕನಾಗಿ ಸತತ 11 ಟಾಸ್ಗಳಲ್ಲಿ ಸೋತಿರುವ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವೆಸ್ಟ್ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಹೆಸರಲ್ಲಿದ್ದ ಅನಪೇಕ್ಷಿತ ಏಕದಿನ ಕ್ರಿಕೆಟ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ರೋಹಿತ್ ಅವರ ಟಾಸ್ನಲ್ಲಿ ಸೋಲುವ ಪ್ರವೃತ್ತಿಯು 2023ರ ನವೆಂಬರ್ನಲ್ಲಿ ಆರಂಭವಾಗಿದ್ದು, ಅದು 2025ರ ಮಾರ್ಚ್ ತನಕವೂ ಮುಂದುವರಿದಿದೆ. ದುಬೈನಲ್ಲಿ ರವಿವಾರ ನ್ಯೂಝಿಲ್ಯಾಂಡ್ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲೂ ರೋಹಿತ್ ಟಾಸ್ ಸೋತಿದ್ದಾರೆ.
ಲಾರಾ ಅವರು 1998ರ ಅಕ್ಟೋಬರ್ನಿಂದ 1999ರ ಮೇ ತನಕ ಸತತ 12 ಬಾರಿ ಟಾಸ್ ಸೋತಿದ್ದರು.
ಟೀಮ್ ಇಂಡಿಯಾವು ಇದೀಗ ಸತತ 15ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತಿದೆ. ಈ ಪೈಕಿ ರೋಹಿತ್ ನಾಯಕತ್ವದಲ್ಲಿ ಸತತ 12 ಬಾರಿ ಟಾಸ್ ಸೋತಿದೆ.
ರೋಹಿತ್ ಅವರು ನೆದರ್ಲ್ಯಾಂಡ್ಸ್ ತಂಡದ ಮಾಜಿ ನಾಯಕ ಪೀಟರ್ ಬೊರೆನ್ ದಾಖಲೆಯನ್ನು ಮುರಿದರು. ಬೊರೆನ್ 2011ರ ಮಾರ್ಚ್ನಿಂದ 2013ರ ಆಗಸ್ಟ್ ತನಕ ಸತತ 11 ಟಾಸ್ಗಳನ್ನು ಸೋತಿದ್ದರು.
ಚಾಂಪಿಯನ್ಸ್ ಟ್ರೋಫಿಯಂತಹ ಅತಿ ಒತ್ತಡದ ಟೂರ್ನಿಗಳಲ್ಲಿ ಟಾಸ್ ಪಂದ್ಯದ ಫಲಿತಾಂಶಕ್ಕೆ ಸಂಬಂಧಿಸಿ ನಿರ್ಣಾಯಕ ಪಾತ್ರವಹಿಸಲಿದೆ. ಆದರೆ ರೋಹಿತ್ ನೇತೃತ್ವದ ಭಾರತ ತಂಡವು ಸತತವಾಗಿ ಟಾಸ್ ಸೋತಿದ್ದರೂ ಉತ್ತಮ ಪ್ರದರ್ಶನ ನೀಡುವಲ್ಲಿ ಶಕ್ತವಾಗಿದೆ.
ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಭಾರತ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಭಾರತ ತಂಡವು ತನ್ನ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವೇಗದ ಬೌಲರ್ ಮ್ಯಾಟ್ ಹೆನ್ರಿ ದಕ್ಷಿಣ ಆಫ್ರಿಕಾ ವಿರುದ್ಧ ಲಾಹೋರ್ನಲ್ಲಿ ನಡೆದಿದ್ದ ಸೆಮಿ ಫೈನಲ್ ಪಂದ್ಯದ ವೇಳೆ ತನ್ನ ಭುಜನೋವಿಗೆ ಒಳಗಾಗಿದ್ದು, ಟೂರ್ನಿಯಿಂದ ಹೊರ ನಡೆದಿದ್ದಾರೆ. ಹೆನ್ರಿ ಬದಲಿಗೆ ವೇಗದ ಬೌಲರ್ ನಾಥನ್ ಸ್ಮಿತ್ ಆಡಿದ್ದು, ನ್ಯೂಝಿಲ್ಯಾಂಡ್ ತನ್ನ ಆಡುವ 11ರ ಬಳಗದಲ್ಲಿ ಕೇವಲ ಒಂದು ಬದಲಾವಣೆ ಮಾಡಿದೆ.