ರೋಹಿತ್ ಶರ್ಮಾ ಏಕೆ ನಿವೃತ್ತಿಯಾಗಬೇಕು?: ಎಬಿ ಡಿವಿಲಿಯರ್ಸ್ ಪ್ರಶ್ನೆ

ರೋಹಿತ್ ಶರ್ಮಾ , ಎಬಿ ಡಿವಿಲಿಯರ್ಸ್ | PTI
ಹೊಸದಿಲ್ಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತ ಕ್ರಿಕೆಟ್ ತಂಡವು 4 ವಿಕೆಟ್ಗಳ ಅಂತರದಿಂದ ರೋಚಕವಾಗಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ದಂತಕತೆ ಎಬಿ ಡಿ ವಿಲಿಯರ್ಸ್ ಬ್ಯಾಟರ್ ಹಾಗೂ ನಾಯಕನಾಗಿ ರೋಹಿತ್ ಶರ್ಮಾರ ಕೊಡುಗೆಯನ್ನು ಕೊಂಡಾಡಿದರು. ರೋಹಿತ್ ಈಗ ಏಕೆ ನಿವೃತ್ತಿಯಾಗಬೇಕು ಎಂದು ಪ್ರಶ್ನಿಸಿದ್ದಾರೆ.
ಭಾರತ ತಂಡವು 3ನೇ ಬಾರಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಜಯಿಸಿತ್ತು. ರೋಹಿತ್ ಶರ್ಮಾರ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿತ್ತು.
ರೋಹಿತ್ ನಾಯಕತ್ವದಲ್ಲಿ ಭಾರತ ತಂಡವು 9 ತಿಂಗಳೊಳಗೆ ತನ್ನ ಎರಡನೇ ಐಸಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಬ್ರಿಡ್ಜ್ಟೌನ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದ ಭಾರತ ತಂಡವು 2024ರ ಟಿ20 ವಿಶ್ವಕಪ್ ಗೆದ್ದುಕೊಂಡಿದೆ.
ಭಾರತ ತಂಡವು 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಜಯಿಸಿ ಪ್ರಶಸ್ತಿ ಬರ ನೀಗಿಸಿಕೊಂಡಿದೆ. ಈ ಪ್ರಶಸ್ತಿಯ ಮೂಲಕ ರೋಹಿತ್ ಅವರು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿರುವ ವಿಚಾರದಲ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಬಾರ್ಬಡೋಸ್ನಲ್ಲಿ ವಿಶ್ವಕಪ್ ಗೆದ್ದ ನಂತರ ಟಿ20 ಕ್ರಿಕೆಟ್ನಿಂದ ನಿವೃತ್ತಿಯಾದಂತೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನಂತರ ರೋಹಿತ್ ಏಕದಿನ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿ ಹರಡಿತ್ತು. ಫೈನಲ್ ಪಂದ್ಯದಲ್ಲಿ 76 ರನ್ ಗಳಿಸಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆಯುವುದರೊಂದಿಗೆ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದರು.
‘‘ಕೇವಲ ನಾಯಕನಾಗಿ ಮಾತ್ರವಲ್ಲ ಬ್ಯಾಟರ್ ಆಗಿಯೂ ಅತ್ಯುತ್ತಮ ದಾಖಲೆ ಹೊಂದಿರುವ ರೋಹಿತ್ ಏಕೆ ನಿವೃತ್ತಿಯಾಗಬೇಕು? ನ್ಯೂಝಿಲ್ಯಾಂಡ್ ವಿರುದ್ಧ ಫೈನಲ್ ಪಂದ್ಯದಲ್ಲಿ 76 ರನ್ ಗಳಿಸಿದ್ದ ರೋಹಿತ್ ಭಾರತಕ್ಕೆ ಅದ್ಭುತ ಆರಂಭ ಒದಗಿಸಿದ್ದರು. ರನ್ ಚೇಸ್ಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಒತ್ತಡ ಹೆಚ್ಚಿದ್ದಾಗ ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ್ದಾರೆ. ರೋಹಿತ್ ಈಗ ನಿವೃತ್ತಿಯಾಗಲು ಯಾವುದೇ ಕಾರಣವಿಲ್ಲ. ಯಾವುದೇ ಟೀಕೆಗಳನ್ನು ಎದುರಿಸಲು ಕಾರಣವಿಲ್ಲ. ಅವರ ದಾಖಲೆಯೇ ಎಲ್ಲವನ್ನು ಮಾತನಾಡುತ್ತದೆ’’ ಎಂದು ಡಿ ವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
‘‘ನಾವು ಪವರ್ಪ್ಲೇನಲ್ಲಿ ಅವರ ಸ್ಟ್ರೈಕ್ ರೇಟ್ ಅನ್ನು ನೋಡಿದರೆ, ಅದು ಆರಂಭಿಕ ಬ್ಯಾಟರ್ ಆಗಿ ತುಂಬಾ ಕಡಿಮೆ ಇತ್ತು. ಆದರೆ 2022ರಿಂದ ಅವರ ಸ್ಟ್ರೈಕ್ರೇಟ್ ಮೊದಲ ಪವರ್ ಪ್ಲೇನಲ್ಲಿ 115ಕ್ಕೆ ಏರಿದೆ. ಅದು ಒಳ್ಳೆಯದು ಹಾಗೂ ಶ್ರೇಷ್ಠತೆಯ ನಡುವಿನ ವ್ಯತ್ಯಾಸವಾಗಿದೆ’’ಎಂದು ಕಳೆದ ಕೆಲವು ವರ್ಷಗಳಲ್ಲಿ ಆಟಗಾರನಾಗಿ ರೋಹಿತ್ರ ಬೆಳವಣಿಗೆಯನ್ನು ಡಿವಿಲಿಯರ್ಸ್ ಬೆಟ್ಟು ಮಾಡಿದರು.
‘‘ಇತರ ನಾಯಕರಿಗೆ ಹೋಲಿಸಿದರೆ ರೋಹಿತ್ ಅವರ ಗೆಲುವಿನ ಶೇಕಡಾವಾರು ಪ್ರಮಾಣ ಸುಮಾರು 74ರಷ್ಟಿದೆ. ಇದು ಹಿಂದಿನ ಯಾವುದೇ ನಾಯಕರಿಗಿಂತ ಸಾಕಷ್ಟು ಉತ್ತಮವಾಗಿದೆ. ಅವರು ಹೀಗೆಯೇ ಮುಂದುವರಿದರೆ ಓರ್ವ ಸಾರ್ವಕಾಲಿಕ ಶ್ರೇಷ್ಠ ಏಕದಿನ ನಾಯಕರಾಗಿ ಹೊರಹೊಮ್ಮಬಹುದು. ನಾನು ನಿವೃತ್ತಿಯಾಗುತ್ತಿಲ್ಲ. ವದಂತಿಗಳನ್ನು ನಿಲ್ಲಿಸಬೇಕೆಂದು ಎಂದು ಅವರು ವಿನಂತಿಸಿದ್ದಾರೆ’’, ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
.........................