ಐಪಿಎಲ್ನಲ್ಲಿ 250 ಪಂದ್ಯಗಳನ್ನಾಡಿದ ಎರಡನೇ ಆಟಗಾರ ರೋಹಿತ್ ಶರ್ಮಾ
ರೋಹಿತ್ ಶರ್ಮಾ | Photo: PTI
ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಎಂ.ಎಸ್. ಧೋನಿಯ ನಂತರ 250 ಐಪಿಎಲ್ ಪಂದ್ಯಗಳನ್ನು ಆಡಿರುವ ಎರಡನೇ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.
ಚಂಡಿಗಡದ ಮುಲ್ಲನ್ಪುರದಲ್ಲಿ ಗುರುವಾರ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ನ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಮೂಲಕ ರೋಹಿತ್ ಈ ಮೈಲಿಗಲ್ಲು ತಲುಪಿದ್ದಾರೆ.
ರೋಹಿತ್ ಈಗ ರದ್ದುಗೊಂಡಿರುವ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಆಡುವ ಮೂಲಕ 2008ರಲ್ಲಿ ತನ್ನ ಐಪಿಎಲ್ ಪಯಣ ಆರಂಭಿಸಿದ್ದರು. 2011ರಿಂದ ಮುಂಬೈ ತಂಡದಲ್ಲಿರುವ ರೋಹಿತ್ ಐದು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಜಯಿಸಲು ನಾಯಕತ್ವ ವಹಿಸಿದ್ದರು.
ಈ ತನಕ 256 ಐಪಿಎಲ್ ಪಂದ್ಯಗಳನ್ನು ಆಡಿರುವ ಧೋನಿ ಅವರು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಈ ತನಕ 249 ಐಪಿಎಲ್ ಪಂದ್ಯಗಳಲ್ಲಿ ಆಡಿರುವ ರೋಹಿತ್ 30ರ ಸರಾಸರಿಯಲ್ಲಿ 6,472 ರನ್ ಗಳಿಸಿದ್ದಾರೆ. ಐಪಿಎಲ್ ವೃತ್ತಿಜೀವನದಲ್ಲಿ 2 ಶತಕ ಹಾಗೂ 42 ಅರ್ಧಶತಕಗಳನ್ನು ಗಳಿಸಿದ್ದಾರೆ. ರವಿವಾರ ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಹಿತ್ ಔಟಾಗದೆ 105 ರನ್ ಗಳಿಸಿದ್ದರು. ಆದರೆ ಈ ಪಂದ್ಯವನ್ನು ಮುಂಬೈ 20 ರನ್ನಿಂದ ಸೋತಿತ್ತು.