ಡೆಲ್ಲಿ ವಿರುದ್ದ ಸಾವಿರ ರನ್ ಗಳಿಸಿದ ಎರಡನೇ ಬ್ಯಾಟರ್ ರೋಹಿತ್ ಶರ್ಮಾ
ರೋಹಿತ್ ಶರ್ಮಾ | PC : PTI
ಹೊಸದಿಲ್ಲಿ : ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿರುವ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ರವಿವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ದ ಮಾಜಿ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು.
ಕೇವಲ 27 ಎಸೆತಗಳಲ್ಲಿ 49 ರನ್ ಗಳಿಸಿದ ರೋಹಿತ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1000 ರನ್ ಪೂರೈಸಿದ ಎರಡನೇ ಬ್ಯಾಟರ್ ಎನಿಸಿಕೊಂಡರು. ಆರ್ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಡೆಲ್ಲಿ ವಿರುದ್ಧ ಈ ಮೈಲಿಗಲ್ಲು ತಲುಪಿರುವ ಮೊದಲ ಬ್ಯಾಟರ್ ಆಗಿದ್ದಾರೆ.
ಇಂದಿನ ಪಂದ್ಯಕ್ಕಿಂತ ಮೊದಲು ರೋಹಿತ್ ಅವರು ಡೆಲ್ಲಿ ವಿರುದ್ಧ 33 ಇನಿಂಗ್ಸ್ಗಳಲ್ಲಿ 32.56ರ ಸರಾಸರಿಯಲ್ಲಿ ಒಟ್ಟು 977 ರನ್ ಗಳಿಸಿದ್ದರು. ಕೊಹ್ಲಿ ಡೆಲ್ಲಿ ತಂಡದ ವಿರುದ್ಧ 27 ಇನಿಂಗ್ಸ್ಗಳಿಂದ 51.50 ಸರಾಸರಿಯಲ್ಲಿ ಒಟ್ಟು 1,030 ರನ್ ಗಳಿಸಿದ್ದರು.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ 1000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಕೂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1000 ರನ್ ಗಳಿಸುವಲ್ಲಿ ಶಕ್ತರಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರು ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.
ಇದಕ್ಕೂ ಮೊದಲು ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ರವಿವಾರ ಟಾಸ್ ಜಯಿಸಿದ ಡೆಲ್ಲಿ ತಂಡ ಮುಂಬೈ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ವಿಶ್ವದ ನಂ.1 ಟಿ-20 ಬ್ಯಾಟರ್ ಸೂರ್ಯಕುಮಾರ್ ಯಾದವ್ ನಾಲ್ಕು ತಿಂಗಳುಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್ಗೆ ವಾಸಪಾದರು.
ಡಿಸೆಂಬರ್ನಲ್ಲಿ ಸ್ಪೋರ್ಟ್ಸ್ ಹರ್ನಿಯಾದ ಸರ್ಜರಿಗೆ ಒಳಗಾಗಿದ್ದ ಸೂರ್ಯಕುಮಾರ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಸಕ್ರಿಯ ಕ್ರಿಕೆಟಿಗೆ ವಾಪಸಾಗಲು ಅನುಮತಿ ಪಡೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿತ್ತು. ವೇಗಿ ರಿಚರ್ಡ್ಸನ್ ಗಾಯಗೊಂಡಿರುವ ಮಿಚೆಲ್ ಮಾರ್ಷ್ ಬದಲಿಗೆ, ಆಲ್ರೌಂಡರ್ ಲಲಿತ್ ಯಾದವ್ ಅವರು ರಿಸಿಖ್ ದರ್ ಬದಲಿಗೆ ಆಡಿದ್ದಾರೆ.