ಕಡಿಮೆ ಬೆಲೆಗೆ ಉಳಿಸಿಕೊಂಡ ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ ಹೇಳಿದ್ದೇನು?
ರೋಹಿತ್ ಶರ್ಮಾ (PTI)
ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ, ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡವು ಮುಂದಿನ ಋತುವಿಗೆ ಉಳಿಸಿಕೊಂಡಿದೆ.
ಆಟಗಾರರ ರಿಟೆನ್ಶನ್ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿರುವ ಮುಂಬೈ ಫ್ರಾಂಚೈಸಿಯು, ಐವರು ಆಟಗಾರರನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ. ಐವರು ಆಟಗಾರ ಪೈಕಿ ರೋಹಿತ್ ಶರ್ಮಾ ಒಬ್ಬರು. ಅವರನ್ನು ಕಡಿಮೆ ಬೆಲೆಗೆ ಉಳಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
“ನಾನು ಟಿ20 ಕ್ರಿಕೆಟ್ ನಿಂದ ನಿವೃತ್ತಿ ಹೊಂದಿರುವುದರಿಂದ, ಇದು ನನಗೆ ಸರಿಯಾದ ರಿಟೆನ್ಶನ್ ಜಾಗವಾಗಿದೆ. ಉನ್ನತ ಮಟ್ಟದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಆಟಗಾರರಿಗೆ ಆದ್ಯತೆ ಸಿಗಬೇಕು. ಆಟಗಾರರು ಹರಾಜಿಗೆ ಬಂದ ನಂತರ ಮತ್ತೆ ಅವರನ್ನು ಉಳಿಸಿಕೊಳ್ಳುವುದು ಕಷ್ಟ” ಎಂದು ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ.
“ತಂಡದಲ್ಲಿ ನಾವು ಯಾವಾಗಲೂ ಪ್ರಮುಖ ಆಟಗಾರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಹರಾಜಿನಲ್ಲಿ ಉತ್ತಮ ಆಟಗಾರರನ್ನು ಸೆಳೆಯಲು ನಮಗೆ ಅವಕಾಶವಿದೆ. ಮ್ಯಾಚ್ ವಿನ್ನರ್ ಆಗಬಹುದಾದ ಆಟಗಾರರ ತಂಡ ಕಟ್ಟಲು ನಮಗೆ ಅವಕಾಶ ಸಿಗಬಹುದು", ಎಂದು ಅವರು ಮುಂಬೈ ಇಂಡಿಯನ್ಸ್ ತಂಡದ ಬಗ್ಗೆ ಮಾತನಾಡಿದ್ದಾರೆ.
"ನಾನು ಮುಂಬೈ ಇಂಡಿಯನ್ಸ್ಗಾಗಿ ತುಂಬಾ ಕ್ರಿಕೆಟ್ ಆಡಿದ್ದೇನೆ. ಕಳೆದ ಎರಡು ಅಥವಾ ಮೂರು ವರ್ಷಗಳಲ್ಲಿ ನಾವು ಅತ್ಯುತ್ತಮವಾದ ಕ್ರಿಕೆಟ್ ಆಡಲಿಲ್ಲ” ಎಂದು ರೋಹಿತ್ ಹೇಳಿದರು.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಉಳಿಸಿಕೊಂಡಿರುವ ಇತರ ನಾಲ್ವರು ಆಟಗಾರರಲ್ಲಿ ಜಸ್ ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಸೇರಿದ್ದಾರೆ.