ದುಲೀಪ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ?
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ | PTI
ಹೊಸದಿಲ್ಲಿ : ಭಾರತದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದುಲೀಪ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಬಾಂಗ್ಲಾದೇಶ ವಿರುದ್ಧ ಭಾರತದ ಟೆಸ್ಟ್ ಸರಣಿಯ ಹಿನ್ನೆಲೆಯಲ್ಲಿ ಈ ಹೆಜ್ಜೆ ಇಡಬಹುದು.
ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆಯಲಿರುವ ದುಲೀಪ್ ಟ್ರೋಫಿಯಲ್ಲಿ ಪ್ರಮುಖ ಆಟಗಾರರು ಭಾಗವಹಿಸುವುದನ್ನು ಆಯ್ಕೆ ಸಮಿತಿ ಬಯಸುತ್ತಿದೆ.
ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ, ಪಂದ್ಯಾವಳಿಯಲ್ಲಿ ಭರವಸೆಯ ಆಟಗಾರರಾದ ಶುಭಮನ್ ಗಿಲ್, ಕೆ.ಎಲ್.ರಾಹುಲ್, ಅಕ್ಷರ್ ಪಟೇಲ್, ರವೀಂದ್ರ ಜಡೇಜ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ ಹಾಗೂ ಕುಲದೀಪ್ ಯಾದವ್ ಭಾಗವಹಿಸುವ ನಿರೀಕ್ಷೆ ಇದೆ.
ವೇಗದ ಬೌಲರ್ ಜಸ್ ಪ್ರಿತ್ ಬುಮ್ರಾ ದುಲೀಪ್ ಟ್ರೋಫಿಯಲ್ಲಿ ಭಾಗವಹಿಸುವುದಿಲ್ಲ.
ಮುಂಬರುವ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ ಅವರ ಲಭ್ಯತೆಯ ಕುರಿತು ಸೀನಿಯರ್ ಆಯ್ಕೆ ಸಮಿತಿಯು ಚರ್ಚಿಸುವ ಸಾಧ್ಯತೆಯಿದೆ. ಆಸ್ಟ್ರೇಲಿಯ ವಿರುದ್ಧ 5 ಪಂದ್ಯಗಳ ಸಹಿತ ಮುಂದಿನ 4 ತಿಂಗಳುಗಳಲ್ಲಿ ಭಾರತವು 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಸೆಪ್ಟಂಬರ್ 5ರಿಂದ 24ರ ತನಕ ನಡೆಯಲಿರುವ ದುಲೀಪ್ ಟ್ರೋಫಿಯು ಆಟಗಾರರಿಗೆ ನಿರ್ಣಾಯಕ ಮ್ಯಾಚ್ ಪ್ರಾಕ್ಟೀಸ್ ಆಗಿದ್ದು ತಮ್ಮ ಫಿಟ್ನೆಸ್ ಹಾಗೂ ಸಿದ್ಧತೆಯನ್ನು ಪರಿಶೀಲಿಸುವ ವೇದಿಕೆಯಾಗಿದೆ. ಅಗ್ರ ಆಟಗಾರರ ಸೇರ್ಪಡೆಯು ಪಂದ್ಯಾವಳಿಯಲ್ಲಿ ಸ್ಪರ್ಧಾತ್ಮಕವನ್ನು ಹೆಚ್ಚಿಸುವ ನಿರೀಕ್ಷೆ ಇದೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯವು ಸೆಪ್ಟಂಬರ್ 19ರಿಂದ ಚೆನ್ನೈನಲ್ಲಿ ಆರಂಭವಾಗಲಿದೆ.