ಹಾರ್ದಿಕ್ ಪಾಂಡ್ಯ ಅಡಿಯಲ್ಲಿ ಆಡಿದರೆ ರೋಹಿತ್ ಸಣ್ಣವರಾಗುವುದಿಲ್ಲ: ಸಿದು
ಹಾರ್ದಿಕ್ ಪಾಂಡ್ಯ, ರೋಹಿತ್ | X\ @IPL
ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಮುಂಬೈ ಇಂಡಿಯನ್ಸ್ ನ ನಾಯಕತ್ವ ಬದಲಾವಣೆಯ ಸುತ್ತ ಎದ್ದಿರುವ ಚರ್ಚೆ ಇನ್ನೂ ನಿಂತಿಲ್ಲ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ನವಜೋತ್ ಸಿಂಗ್ ಸಿದು ಮಂಗಳವಾರ ಈ ವಿಷಯದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
2024ರ ಐಪಿಎಲ್ ಋತುವಿನ ಆರಂಭಕ್ಕೆ ಮುನ್ನ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಐದು ಬಾರಿಯ ಪ್ರಶಸ್ತಿ ವಿಜೇತ ನಾಯಕ ರೋಹಿತ್ ಶರ್ಮರಿಂದ ಹಾರ್ದಿಕ್ ಪಾಂಡ್ಯಗೆ ವಹಿಸಲು ಮುಂಬೈ ಇಂಡಿಯನ್ಸ್ ತಂಡದ ಆಡಳಿತವು ನಿರ್ಧರಿಸಿತ್ತು.
ಇದು ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ಈ ವಿಷಯದಲ್ಲಿ ಹಲವು ಕ್ರಿಕೆಟ್ ಪರಿಣತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈಗ ಈ ಚರ್ಚೆಯಲ್ಲಿ ಕ್ರಿಕೆಟಿಗ ಹಾಗೂ ರಾಜಕಾರಣಿ ಸಿದು ಕೂಡ ಸೇರಿಕೊಂಡಿದ್ದಾರೆ.
“ಐವರು ನಾಯಕರು ಜೊತೆಯಾಗಿ ಆಡುತ್ತಿದ್ದ ಭಾರತೀಯ ತಂಡವೊಂದರಲ್ಲಿ ನಾನು ಆಡಿದ್ದೇನೆ. ಕಪಿಲ್ ದೇವ್, ದಿಲೀಪ್ ವೆಂಗ್ಸರ್ಕಾರ್, ಸುನೀಲ್ ಗವಾಸ್ಕರ್, ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ರವಿ ಶಾಸ್ತ್ರಿ. ಅಲ್ಲಿ ಎಲ್ಲಿ ನೋಡಿದರೂ ನಾಯಕರೇ ಇದ್ದರು. ಆಗ ಯಾವುದೇ ಸಮಸ್ಯೆ ಇರಲಿಲ್ಲ. ಯಾಕೆಂದರೆ ಅವರೆಲ್ಲರೂ ದೇಶಕ್ಕಾಗಿ ಆಡುತ್ತಿದ್ದರು. ನಮ್ಮ ದೇಶಕ್ಕಾಗಿ ಆಡುತ್ತಿದ್ದೇವೆ ಎನ್ನುವ ಭಾವನೆಯೇ ಇದಕ್ಕೆ ಕಾರಣವಾಗಿತ್ತು. ಹಾಗಾಗಿ, ಹಾರ್ದಿಕ್ ಪಾಂಡ್ಯ ನಾಯಕತ್ವದಡಿಯಲ್ಲಿ ಆಡುವುದರಿಂದ ರೋಹಿತ್ ಶರ್ಮ ಸಣ್ಣವರಾಗುವುದಿಲ್ಲ'' ಎಂದು 'ಸ್ಟಾರ್ ಸ್ಪೋಟ್ರ್ಸ್'ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಮಾತನಾಡಿದ ಸಿದು ಹೇಳಿದರು.
ಈ ಬಾರಿಯ ಐಪಿಎಲ್ ಋತುವಿಗೆ ಮುನ್ನ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಮಹೇಂದ್ರ ಸಿಂಗ್ ಧೋನಿ, ಋತುರಾಜ್ ಗಾಯಕ್ವಾಡ್ಗೆ ಹಸ್ತಾಂತರಿಸಿದ್ದಾರೆ.
“ಧೋನಿ ಈಗಾಗಲೇ ತಂಡದ ನಾಯಕತ್ವವನ್ನು ಹಸ್ತಾಂತರಿಸಿದ್ದಾರೆ. ಅದೇ ಸಂಗತಿಯು ಮುಂಬೈ ಇಂಡಿಯನ್ಸ್ ನಲ್ಲೂ ಸಂಭವಿಸಿರಬಹುದು. 2020ರ ಬಳಿಕ, ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆದ್ದಿಲ್ಲ. ಅವರು ಮೂರು ವರ್ಷಗಳ ಸಮಯಾವಕಾಶ ನೀಡಿದರು. ಅದು ಯಶಸ್ವಿಯಾಗಿಲ್ಲ (ಇನ್ನೊಂದು ಪ್ರಶಸ್ತಿ ಬಂದಿಲ್ಲ). ಆಗ ಅವರು ಹೊಸ ವ್ಯಕ್ತಿಯನ್ನು ನಾಯಕತ್ವ ಹುದ್ದೆಗೆ ತಂದಿದ್ದಾರೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು'' ಎಂದು ಸಿದು ಅಭಿಪ್ರಾಯಪಟ್ಟರು.
“ಆದರೆ ರೋಹಿತ್ ಶರ್ಮ ಮತ್ತು ಎಮ್.ಎಸ್. ಧೋನಿ ಶ್ರೇಷ್ಠ ಆಟಗಾರರು. ಓರ್ವ ಕುಳ್ಳನು ಪರ್ವತದ ತುದಿಯಲ್ಲಿ ನಿಂತರೂ ಕುಳ್ಳನೇ. ದೇವರು ಬಾವಿಯೊಂದರ ತಳದಲ್ಲಿ ನಿಂತರೂ ದೇವರೇ' ಎಂದು ಅವರು ಹೇಳಿದ್ದಾರೆ.