ರೋಮ್ ಓಪನ್ | ಅಲೆಕ್ಸಾಂಡರ್ ಝ್ವೆರೆವ್ ಚಾಂಪಿಯನ್
ಅಲೆಕ್ಸಾಂಡರ್ ಝ್ವೆರೆವ್ | PC : PTI
ರೋಮ್: ಚಿಲಿ ಆಟಗಾರ ನಿಕೊಲಸ್ ಜರ್ರಿ ಅವರನ್ನು ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 6-4, 7-5 ನೇರ ಸೆಟ್ ಗಳ ಅಂತರದಿಂದ ಮಣಿಸಿರುವ ಅಲೆಕ್ಸಾಂಡರ್ ಝ್ವೆರೆವ್ ಎರಡನೇ ಬಾರಿ ರೋಮ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
2017ರಲ್ಲಿ ಫೋರೊ ಇಟಾಲಿಕೊವನ್ನು ಗೆದ್ದಿರುವ ವಿಶ್ವದ ನಂ.5ನೇ ಆಟಗಾರ ಝ್ವೆರೆವ್ ಆರನೇ ಬಾರಿ ಮಾಸ್ಟರ್ಸ್-1000 ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಮುಂದಿನ ವಾರ ಆರಂಭವಾಗಲಿರುವ ಫ್ರೆಂಚ್ ಓಪನ್ ಝ್ವೆರೆವ್ ಆಡಲಿರುವ ಕೊನೆಯ ಪ್ರಮುಖ ಟೂರ್ನಮೆಂಟ್ ಆಗಿದೆ.
27ರ ಹರೆಯದ ಝ್ವೆರೆವ್ ತಾನಾಡಿದ 11ನೇ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಫೈನಲ್ ನಲ್ಲಿ ಜಯ ಸಾಧಿಸಿದರು. ಅತ್ಯಂತ ಹೆಚ್ಚು ಬಾರಿ ಮಾಸ್ಟರ್ಸ್ ಫೈನಲ್ ಗೆ ತಲುಪಿದ ಜರ್ಮನಿಯ ಝ್ವೆರೆವ್ ತಮ್ಮದೇ ದೇಶದ ಟೆನಿಸ್ ದಂತಕತೆ ಬೋರಿಸ್ ಬೆಕೆರ್ ದಾಖಲೆಯನ್ನು ಸರಿಗಟ್ಟಿದರು.
ಒಂದು ಗಂಟೆ ಹಾಗೂ 41 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಝ್ವೆರವ್ ಸುಲಭವಾಗಿ ಜರ್ರಿ ಅವರನ್ನು ಸೋಲಿಸಿದರು. ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ ನಲ್ಲಿ ಸ್ಟೆಫನೊಸ್ ಸಿಟ್ಸಿಪಾಸ್ ಹಾಗೂ ಟೊಮ್ಮಿ ಪೌಲ್ ಎದುರು ತೋರಿದ್ದ ವೀರೋಚಿತ ಪ್ರದರ್ಶನವನ್ನು ಪುನರಾವರ್ತಿಸುವಲ್ಲಿ ಜರ್ರಿ ವಿಫಲರಾದರು.
ಝ್ವೆರೆವ್ ಈ ವರ್ಷ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಆರು ಬಾರಿ ರೋಮ್ ಚಾಂಪಿಯನ್ ಆಗಿರುವ ನೊವಾಕ್ ಜೊಕೊವಿಕ್ ರನ್ನು ಮೂರನೇ ಸುತ್ತಿನಲ್ಲಿ ಝ್ವೆರವ್ ಅವರ ಸೆಮಿ ಫೈನಲ್ ಎದುರಾಳಿಯಾಗಿದ್ದ ಅಲೆಜಾಂಡ್ರೊ ಟಾಬಿಲೊ ಮಣಿಸಿದ್ದರು.
ಕಳೆದ ವರ್ಷದ ವಿನ್ನರ್ ಡೇನಿಯಲ್ ಮೆಡ್ವೆಡೆವ್ ಅಂತಿಮ-16ರ ಸುತ್ತಿನಲ್ಲಿ ಎಡವಿದ್ದರು. ಇಟಲಿಯ ವಿಶ್ವದ ನಂ.2ನೇ ಆಟಗಾರ ಜನ್ನಿಕ್ ಸಿನ್ನೆರ್ ಹಾಗೂ ಮೂರನೇ ರ್ಯಾಂಕಿನ ಕಾರ್ಲೊಸ್ ಅಲ್ಕರಾಝ್ ಗಾಯದ ಸಮಸ್ಯೆಯ ಕಾರಣಕ್ಕೆ ಟೂರ್ನಮೆಂಟ್ ನಲ್ಲಿ ಆಡಿರಲಿಲ್ಲ.