72 ಗಂಟೆಗಳಲ್ಲಿ ಸತತ 2ನೇ ಹ್ಯಾಟ್ರಿಕ್ ಬಾರಿಸಿದ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ | Photo: NDTV
ರಿಯಾದ್ : ಸೌದಿ ಪ್ರೋ ಲೀಗ್ ಪಂದ್ಯಾವಳಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ 72 ಗಂಟೆಗಳಲ್ಲಿ ತನ್ನ ಸತತ ಎರಡನೇ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ಅವರ ಅಲ್-ನಾಸರ್ ತಂಡವು ಎದುರಾಳಿ ಅಭಾ ತಂಡವನ್ನು 8-0 ಗೋಲುಗಳ ಅಂತರದಿಂದ ಸೋಲಿಸಿತು.
ಒಂಭತ್ತು ಬಾರಿ ಪ್ರಶಸ್ತಿ ಗೆದ್ದಿರುವ ಸೌದಿ ಅರೇಬಿಯದ ಲೀಗ್ ತಂಡದ ಪರವಾಗಿ ಮೊದಲಾರ್ಧದಲ್ಲಿ ರೊನಾಲ್ಡೊ ಸ್ವತಃ ಮೂರು ಗೋಲುಗಳನ್ನು ಬಾರಿಸಿದರು ಹಾಗೂ ಎರಡು ಗೋಲುಗಳಿಗೆ ಸಹಕಾರ ನೀಡಿದರು.
ಇದರೊಂದಿಗೆ ರೊನಾಲ್ಡೊ ಪ್ರಸಕ್ತ ಲೀಗ್ ಋತುವಿನಲ್ಲಿ ಮೂರನೇ ಹ್ಯಾಟ್ರಿಕ್ ಸಾಧಿಸಿದ್ದಾರೆ. ಶನಿವಾರ ನಡೆದ ಅಲ್-ತಾಯ್ ವಿರುದ್ಧದ ಪಂದ್ಯದಲ್ಲೂ ಅವರು ಹ್ಯಾಟ್ರಿಕ್ಗೋಲುಗಳನ್ನು ಗಳಿಸಿದ್ದರು. ಆ ಪಂದ್ಯದಲ್ಲಿ ಅವರ ತಂಡವು 5-1 ಅಂತರದಿಂದ ಜಯಿಸಿದೆ.
ಈಗ ಅವರು ಲೀಗ್ನ ಗರಿಷ್ಠ ಗೋಲು ಗಳಿಕೆದಾರರಾಗಿದ್ದಾರೆ. 29 ಗೋಲುಗಳನ್ನು ಬಾರಿಸಿದ್ದಾರೆ.
ಮಂಗಳವಾರ ಅವರ ಮೊದಲ ಎರಡು ಗೋಲುಗಳು ಫ್ರೀ-ಕಿಕ್ ಗಳ ಮೂಲಕ ಬಂದವು.
ದ್ವಿತೀಯಾರ್ಧದ ಆರಂಭದಲ್ಲಿ ರೊನಾಲ್ಡ್ ಪರವಾಗಿ ಆಡಲು ಬದಲಿ ಆಟಗಾರ ಬಂದರೂ, ಅಲ್-ನಾಸರ್ನ ಆಕ್ರಮಣ ಮುಂದುವರಿಯಿತು. ಸೌದಿ ಅರೇಬಿಯ ಫುಟ್ಬಾಲ್ ತಂಡದ ಅಬ್ದುಲ್ರಹ್ಮಾನ್ ಘರೀಬ್ ತಂಡದ ಆರನೇ ಗೋಲನ್ನು ಬಾರಿಸಿದರು. ಬಳಿಕ ಬದಲಿ ಆಟಗಾರ ಅಬ್ದುಲಝೀಝ್ ಅಲ್-ಅಲಿವ ಇನ್ನೆರಡು ಗೋಲುಗಳನ್ನು ಬಾರಿಸಿದರು.
ಈ ವಿಜಯದ ಹೊರತಾಗಿಯೂ, ಅಲ್-ನಾಸರ್ ಲೀಗ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಅಲ್-ಹಿಲಾಲ್ ಇದೆ. ಈ ಋತುವಿನಲ್ಲಿ ಇನ್ನು 8 ಪಂದ್ಯಗಳು ಬಾಕಿಯಿವೆ.