ಐದು ಪದಕದೊಂದಿಗೆ ಏಶ್ಯನ್ ಗೇಮ್ಸ್ ಅಭಿಯಾನ ಅಂತ್ಯಗೊಳಿಸಿದ ರೋವರ್ ಗಳು
Photo- PTI
ಹಾಂಗ್ಝೌ: ಏಶ್ಯನ್ ಗೇಮ್ಸ್ ನ 2ನೇ ದಿನವಾದ ಸೋಮವಾರ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿರುವ ಭಾರತೀಯ ರೋವರ್ಗಳು ಒಟ್ಟು ಐದು ಪದಕಗಳೊಂದಿಗೆ ಗೇಮ್ಸ್ ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಈ ಹಿಂದಿನ ಆವೃತ್ತಿಯಲ್ಲಿನ ಸಾಧನೆಯನ್ನು (3 ಪದಕ)ಉತ್ತಮಪಡಿಸಿಕೊಂಡಿದೆ.
ಭಾರತೀಯ ರೋವಿಂಗ್ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಚಿನ್ನದ ಪದಕ ಗೆಲ್ಲುವಲ್ಲಿ ಅಸಮರ್ಥವಾಯಿತು. ಐದು ರ್ಷಗಳ ಹಿಂದೆ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಒಟ್ಟಾರೆ 5ನೇ ಸ್ಥಾನ ಪಡೆದಿರುವ ಭಾರತವು 2018ರ ಗೇಮ್ಸ್ಗಿಂತ ಒಂದು ಸ್ಥಾನ ಉತ್ತಮಪಡಿಸಿಕೊಂಡಿದೆ. ಜಕಾರ್ತ ಗೇಮ್ಸ್ ನಲ್ಲಿ ಭಾರತವು 1 ಚಿನ್ನ ಹಾಗೂ 2 ಕಂಚಿನ ಪದಕ ಜಯಿಸಿತ್ತು.
ಆತಿಥೇಯ ತಂಡ ಚೀನಾ 11 ಚಿನ್ನದ ಪದಕ, 2 ಬೆಳ್ಳಿ ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. 2 ಚಿನ್ನದ ಪದಕಗಳು, 4 ಬೆಳ್ಳಿ ಪದಕಗಳು ಹಾಗೂ 1 ಕಂಚಿನ ಪದಕ ಜಯಿಸಿದ್ದ ಉಝ್ಬೇಕಿಸ್ತಾನ 2ನೇ ಸ್ಥಾನ ಪಡೆದಿದೆ.
ಸೋಮವಾರ ಬೆಳಗ್ಗೆ ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನಿತ್ ಕುಮಾರ್ ಹಾಗೂ ಆಶೀಷ್ ಗೊಲಿಯನ್ ಅವರನ್ನೊಳಗೊಂಡ ಪುರುಷರ ಫೋರ್ಸ್ ಟೀಮ್ ಕಡಿಮೆ ಅಂತರದಿಂದ ಬೆಳ್ಳಿ ಪದಕದಿಂದ ವಂಚಿತವಾಯಿತು.
ಪುರುಷರ ಫೋರ್ಸ್ ಸ್ಪರ್ಧೆಯ ಆರಂಭದಲ್ಲಿ 4ನೇ ಸ್ಥಾನದಲ್ಲಿದ್ದ ಭಾರತವು 6:10.81 ಸೆಕೆಂಡ್ನಲ್ಲಿ ಗುರಿ ತಲುಪಿ ಕಂಚಿನ ಪದಕ ಜಯಿಸಿತು. ಚೀನಾ(6:10.04 ಸೆ.) ಹಾಗೂ ಉಝ್ಬೇಕಿಸ್ತಾನ(6:04.96) ಕ್ರಮವಾಗಿ ಬೆಳ್ಳಿ ಹಾಗೂ ಚಿನ್ನದ ಪದಕ ಜಯಿಸಿತು.
ಸತ್ನಮ್ ಸಿಂಗ್, ಪರ್ಮಿಂದರ್ ಸಿಂಗ್, ಜಾಕರ್ ಖಾನ್ ಹಾಗೂ ಸುಖಮೀತ್ ಸಿಂಗ್ ಅವರನ್ನೊಳಗೊಂಡ ಭಾರತ ತಂಡವು ಪುರುಷರ ಕ್ವಾಡ್ರಪಲ್ ಸ್ಕಲ್ಸ್ ಸ್ಪರ್ಧೆಯಲ್ಲಿ 6:08.61 ಸೆಕೆಂಡ್ನಲ್ಲಿ ಗುರಿ ತಲುಪಿ ಕಂಚಿನ ಪದಕ ಜಯಿಸಿತು. ಉಝ್ಬೇಕಿಸ್ತಾನ(6:04.64) ಹಾಗೂ ಚೀನಾ(6:02.65 ಸೆ.)ಕ್ರಮವಾಗಿ ಬೆಳ್ಳಿ ಹಾಗೂ ಚಿನ್ನ ಜಯಿಸಿದವು.
ಪುರುಷರ ಸಿಂಗಲ್ಸ್ ಸ್ಕಲ್ಸ್ ನಲ್ಲಿ ಸ್ಪರ್ಧಿಸಿರುವ ಭಾರತೀಯ ರೋವರ್ ಬಾಲ್ರಾಜ್ ಪಾನ್ವರ್ 7:08.79 ಸೆಕೆಂಡಿನಲ್ಲಿ ಗುರಿ ತಲುಪಿ 4ನೇ ಸ್ಥಾನ ಪಡೆದರು. ಸ್ಪರ್ಧಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಬಾಲ್ರಾಜ್ ಚೊಚ್ಚಲ ಏಶ್ಯನ್ ಗೇಮ್ಸ್ ಪದಕದಿಂದ ವಂಚಿತರಾದರು. ಚೀನಾದ ಲಿಯಾಂಗ್ ಝಾಂಗ್(6:57.06 ಸೆಕೆಂಡ್) ಚಿನ್ನದ ಪದಕ ಜಯಿಸಿದರೆ,ಜಪಾನಿನ ರಿಯುಟಾ ಅರಾಕಾವಾ(6:59.79 ಸೆ.) ಹಾಗೂ ಹಾಂಕಾಂಗ್ನ ಹಿನ್ ಚುನ್ ಚಿಯು (7:8.79 ಸೆಕೆಂಡ್)ಕಂಚು ಜಯಿಸಿದರು.