ಮೂರನೇ ಬಾರಿ ವುಹಾನ್ ಓಪನ್ ಪ್ರಶಸ್ತಿ ಗೆದ್ದ ಸಬಲೆಂಕಾ
ಆರ್ಯನಾ ಸಬಲೆಂಕಾ | PC : PTI
ವುಹಾನ್(ಚೀನಾ : ಸ್ಥಳೀಯ ಆಟಗಾರ್ತಿ ಝೆಂಗ್ ಕ್ವಿನ್ವೆನ್ರನ್ನು ಮಣಿಸಿದ ಆರ್ಯನಾ ಸಬಲೆಂಕಾ ಮೂರು ಬಾರಿ ವುಹಾನ್ ಓಪನ್ ಪ್ರಶಸ್ತಿ ಗೆದ್ದಿರುವ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ರವಿವಾರ 2 ಗಂಟೆ, 40 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಸಬಲೆಂಕಾ ಅವರು ಚೀನಾದ ಆಟಗಾರ್ತಿಯನ್ನು 6-3, 5-7, 6-3 ಸೆಟ್ಗಳ ಅಂತರದಿಂದ ಸೋಲಿಸಿದರು.
ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಝೆಂಗ್ ತಾನು ಹುಟ್ಟಿ ಬೆಳೆದ ನಗರದಲ್ಲಿ 13,000 ಪ್ರೇಕ್ಷಕರ ಸಮ್ಮುಖದಲ್ಲಿ ಫೈನಲ್ ಪಂದ್ಯ ಆಡಿದರು. ಬೆಲಾರುಸ್ ಆಟಗಾರ್ತಿ ಸಬಲೆಂಕಾ ಮೊದಲ ಸೆಟ್ಟನ್ನು 38 ನಿಮಿಷಗಳಲ್ಲಿ ಗೆದ್ದುಕೊಂಡರು. 2ನೇ ಸೆಟ್ಟನ್ನು 7-5 ರಿಂದ ಗೆದ್ದುಕೊಂಡ ಝೆಂಗ್ ಪಂದ್ಯವನ್ನು ಮೂರನೇ ಸೆಟ್ಗೆ ವಿಸ್ತರಿಸಿದರು. ನಿರ್ಣಾಯಕ ಸೆಟ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಸಬಲೆಂಕಾ 6-3 ಅಂತರದಿಂದ ಜಯಶಾಲಿಯಾದರು.
2018 ಹಾಗೂ 2019ರಲ್ಲಿ ವುಹಾನ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಸಬಲೆಂಕಾ ಎಲ್ಲ 17 ಪಂದ್ಯಗಳನ್ನು ಜಯಿಸುವ ಮೂಲಕ ತನ್ನ ಅಜೇಯ ಗೆಲುವಿನ ದಾಖಲೆ ಉಳಿಸಿಕೊಂಡಿದ್ದಾರೆ.
2024ರ ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲೂ ಸಬಲೆಂಕಾ ಹಾಗೂ ಝೆಂಗ್ ಮುಖಾಮುಖಿಯಾಗಿದ್ದರು. ಇದೀಗ ಮುಕ್ತ ಯುಗದಲ್ಲಿ ಚೀನಾ ದೇಶದಲ್ಲಿ 5ನೇ ಪ್ರಶಸ್ತಿ ಜಯಿಸಿದ ಸಬಲೆಂಕಾ ದಾಖಲೆ ನಿರ್ಮಿಸಿದರು.
ಈಗಾಗಲೇ ಎರಡು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳು ಹಾಗೂ ಸಿನ್ಸಿನಾಟಿ ಡಬ್ಲ್ಯುಟಿಎ-1000 ಟೂರ್ನಿಯನ್ನು ಜಯಿಸಿರುವ ಸಬಲೆಂಕಾ ಈ ಋತುವಿನಲ್ಲಿ 4ನೇ ಟ್ರೋಫಿ ಎತ್ತಿ ಹಿಡಿದರು. 7 ಬಾರಿ ಫೈನಲ್ಗೆ ತಲುಪಿದ್ದಾರೆ.
26ರ ಹರೆಯದ ಸಬಲೆಂಕಾ ಅವರು ಇಗಾ ಸ್ವಿಯಾಟೆಕ್ರನ್ನು ಹಿಂದಿಕ್ಕಿ ವರ್ಷಾಂತ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.
ವುಹಾನ್ ಪಂದ್ಯಾವಳಿಯ ಇತಿಹಾಸದಲ್ಲಿ ಫೈನಲ್ಗೆ ತಲುಪಿದ ಚೀನಾದ ಮೊದಲ ಆಟಗಾರ್ತಿ ಎನಿಸಿಕೊಂಡಿರುವ ಝೆಂಗ್, 9ನೇ ರ್ಯಾಂಕಿನಿಂದ 7ನೇ ರ್ಯಾಂಕಿಗೆ ಜಿಗಿದಿದ್ದು, ವರ್ಷಾಂತ್ಯದಲ್ಲಿ ನಡೆಯಲಿರುವ ಡಬ್ಲ್ಯುಟಿಎ ಫೈನಲ್ಸ್ನಲ್ಲಿ ಅರ್ಹತೆ ಪಡೆಯುವ ರೇಸ್ನಲ್ಲಿದ್ದಾರೆ. 2013ರಲ್ಲಿ ಲಿ ನಾ ಡಬ್ಲ್ಯುಟಿಎ ಫೈನಲ್ಸ್ಗೆ ಅರ್ಹತೆ ಪಡೆದಿರುವ ಚೀನಾದ ಮೊದಲ ಆಟಗಾರ್ತಿಯಾಗಿದ್ದರು.