ಹುಟ್ಟಿದ ದಿನದಂದು ಬಾಲ್ಯದ ಕೋಚನ್ನು ಸ್ಮರಿಸಿದ ಸಚಿನ್
ಮುಂಬೈ: ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ರವಿವಾರ ತನ್ನ ಬಾಲ್ಯದ ಕೋಚ್ ರಮಾಕಾಂತ ಅಚ್ರೇಕರ್ರನ್ನು ಅವರ ಹುಟ್ಟಿದ ದಿನದ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದಾರೆ.
ತನ್ನ ದಿವಂಗತ ಕೋಚ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಕ್ರಿಕೆಟ್ನಲ್ಲಿ ನಾನು ಏನಾಗಿದ್ದೇನೋ ಹಾಗೆ ನನ್ನನ್ನು ಮಾಡಿದ್ದು ಅವರು ಎಂದು ಸಚಿನ್ ಹೇಳಿದ್ದಾರೆ.
ಬಾಲಕನಾಗಿದ್ದಾಗ ತನ್ನ ಪ್ರೀತಿಯ ಕೋಚ್ನಿಂದ ಬ್ಯಾಟಿಂಗ್ ಪಾಠಗಳನ್ನು ಕಲಿತುಕೊಳ್ಳುವುದನ್ನು ತೋರಿಸುವ ಚಿತ್ರವೊಂದನ್ನೂ ಅವರು ಹಾಕಿದ್ದಾರೆ.
“ನನ್ನನ್ನು ಕ್ರಿಕೆಟಿಗನಾಗಿ ಮಾಡಿದ ವ್ಯಕ್ತಿಗೆ! ಅವರು ಕಲಿಸಿದ ಪಾಠಗಳು ನನ್ನ ಬದುಕಿನುದ್ದಕ್ಕೂ ನನ್ನೊಂದಿಗೆ ಇವೆ. ನಿಮ್ಮ ಹುಟ್ಟಿದ ದಿನದಂದು ನಿಮ್ಮನ್ನು ಹೆಚ್ಚಾಗಿ ಜ್ಞಾಪಿಸಿಕೊಳ್ಳುತ್ತಿದ್ದೇನೆ. ನೀವು ನನಗಾಗಿ ಮಾಡಿದ ಪ್ರತಿಯೊಂದಕ್ಕೂ ನಾನು ನಿಮಗೆ ಆಭಾರಿಯಾಗಿದ್ದೇನೆ, ಅಚ್ರೇಕರ್ ಸರ್’’ ಎಂಬುದಾಗಿ ಸಚಿನ್ ಬರೆದಿದ್ದಾರೆ.
ರಮಾಕಾಂತ ಅಚ್ರೇಕರ್ 2019 ಜನವರಿ 2ರಂದು 87ರ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕೋಚ್ ಆಗಿ ಕ್ರಿಕೆಟ್ಗೆ ನೀಡಿದ ಕೊಡುಗೆಗಾಗಿ ಅವರಿಗೆ 1990ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗಿತ್ತು. ಅವರು 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.
ಸಚಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ರನ್ಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರು 200 ಪಂದ್ಯಗಳಲ್ಲಿ 53ಕ್ಕೂ ಹೆಚ್ಚಿನ ಸರಾಸರಿಯಲ್ಲಿ 15,921 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ 51 ಶತಕಗಳು ಮತ್ತು 68 ಅರ್ಧ ಶತಕಗಳಿವೆ.
ಅವರು 463 ಏಕದಿನ ಪಂದ್ಯಗಳಲ್ಲಿ 44.83ರ ಸರಾಸರಿಯಲ್ಲಿ 18,426 ರನ್ಗಳನ್ನು ಗಳಿಸಿದ್ದಾರೆ. ಅದರಲ್ಲಿ 49 ಶತಕಗಳು ಮತ್ತು 96 ಅರ್ಧ ಶತಕಗಳಿವೆ.
ಅವರು ಒಂದು ಟ್ವೆಂಟಿ20 ಪಂದ್ಯವನ್ನೂ ಆಡಿದ್ದು, 10 ರನ್ಗಳನ್ನು ಗಳಿಸಿದ್ದಾರೆ.
ಎಲ್ಲಾ ಮೂರು ಮಾದರಿಗಳ ಕ್ರಿಕೆಟ್ನಲ್ಲಿನ ಅವರ ರನ್ಗಳನ್ನು ಒಟ್ಟು ಸೇರಿಸಿದರೆ, ಸಚಿನ್ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಕೆದಾರರಾಗಿದ್ದಾರೆ. ಅವರು ಒಟ್ಟು 664 ಪಂದ್ಯಗಳಿಂದ 48.52ರ ಸರಾಸರಿಯಲ್ಲಿ 34,357 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ 100 ಶತಕಗಳು ಮತ್ತು 164 ಅರ್ಧ ಶತಕಗಳಿವೆ. 100 ಅಂತರ್ರಾಷ್ಟ್ರೀಯ ಶತಕಗಳನ್ನು ಬಾರಿಸಿದ ಏಕೈಕ ಆಟಗಾರ ಅವರಾಗಿದ್ದಾರೆ.