ಶ್ರೀಲಂಕಾ ವಿರುದ್ಧ ಪಂದ್ಯಕ್ಕಿಂತ ಮೊದಲು ವಿಶ್ವಕಪ್ ಟ್ರೋಫಿಯೊಂದಿಗೆ ಕಾಣಿಸಿಕೊಂಡ ಸಚಿನ್ ತೆಂಡುಲ್ಕರ್
Photo: IANS
ಹೊಸದಿಲ್ಲಿ, ನ.2: ಮುಂಬೈನಲ್ಲಿ ಗುರುವಾರ ವಾಂಖೆಡೆ ಸ್ಟೇಡಿಯಮ್ನಲ್ಲಿ ಶ್ರೀಲಂಕಾ ವಿರುದ್ಧ ಭಾರತವು ವಿಶ್ವಕಪ್ ಪಂದ್ಯವನ್ನಾಡುವ ಮೊದಲು ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಪ್ರತಿಷ್ಠಿತ ವಿಶ್ವಕಪ್ ಟ್ರೋಫಿಯೊಂದಿಗೆ ಮೈದಾನದಲ್ಲಿ ಕಾಣಿಸಿಕೊಂಡರು.
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್-2023ರ ಜಾಗತಿಕ ರಾಯಭಾರಿಯಾಗಿರುವ ತೆಂಡುಲ್ಕರ್ ತಮ್ಮ ತವರು ಮೈದಾನಕ್ಕೆ ಇಳಿದಾಗ ನೆರೆದಿದ್ದ ಪ್ರೇಕ್ಷಕರು ಸಚಿನ್ ಸಚಿನ್ ಎಂದು ಜೋರಾಗಿ ಕೂಗುತ್ತಿರುವುದು ಕೇಳಿಬಂತು.
ಯುನಿಸೆಫ್ ಟಿ-ಶರ್ಟ್ ಧರಿಸಿದ್ದ ತೆಂಡುಲ್ಕರ್ ಅವರಿಗೆ ಶ್ರೀಲಂಕಾದ ಮಾಜಿ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಸಾಥ್ ನೀಡಿದರು.
ಅಕ್ಟೋಬರ್ 14ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೆ ಮೊದಲು ತೆಂಡುಲ್ಕರ್ ವಿಶ್ವಕಪ್ ಟ್ರೋಫಿಯೊಂದಿಗೆ ಕಾಣಿಸಿಕೊಂಡಿದ್ದರು.
ವಾಂಖೆಡೆ ಸ್ಟೇಡಿಯಮ್ನಲ್ಲಿ ಆಳೆತ್ತರದ ತನ್ನ ಪ್ರತಿಮೆಯನ್ನು ಅನಾವರಣಗೊಳಿಸಿದ ಮರುದಿನ ತೆಂಡುಲ್ಕರ್ ವಿಶ್ವಕಪ್ ಟ್ರೋಫಿಯೊಂದಿಗೆ ಗಮನ ಸೆಳೆದರು.
ಪ್ರಮೋದ್ ಕಾಳೆ ಕೆತ್ತಿರುವ ತೆಂಡುಲ್ಕರ್ ಅವರ ಪ್ರತಿಮೆಯನ್ನು ಬುಧವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಅನಾವರಣಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಸಚಿನ್ ಅವರ ಪತ್ನಿ ಅಂಜಲಿ ಹಾಗೂ ಮಗಳು ಸಾರಾ ಕೂಡ ಇದ್ದರು.
ತೆಂಡುಲ್ಕರ್ 1992ರಿಂದ 2011ರ ತನಕ ಆರು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದಾರೆ. ಕೊನೆಗೂ ತನ್ನ ಕೊನೆಯ ವಿಶ್ವಕಪ್ ಟೂರ್ನಿಯಲ್ಲಿ 2011ರ ಎಪ್ರಿಲ್ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದ್ದರು.