ವಾಂಖೇಡೆ ಸ್ಟೇಡಿಯಮ್ ನಲ್ಲಿ ಅನಾವರಣಗೊಳ್ಳಲಿದೆ ಸಚಿನ್ ತೆಂಡುಲ್ಕರ್ ಪ್ರತಿಮೆ
Photo: PTI
ಹೊಸದಿಲ್ಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯ ನಡೆಯುವ ಮುನ್ನಾ ದಿನ, ಅಂದರೆ ಬುಧವಾರ ಮುಂಬೈಯ ವಾಂಖೇಡೆ ಸ್ಟೇಡಿಯಮ್ ನಲ್ಲಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ಆಳೆತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು.
ತೆಂಡುಲ್ಕರ್ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಯೋಜನೆಯನ್ನು ಈ ವರ್ಷದ ಆದಿ ಭಾಗದಲ್ಲಿ ಪ್ರಕಟಿಸಲಾಗಿತ್ತು.
ಹೊಡೆತವೊಂದನ್ನು ಬಾರಿಸುತ್ತಿರುವಾಗ ಚಲನೆಯಲ್ಲಿರುವುದನ್ನು ತೋರಿಸುವ ಪ್ರತಿಮೆಯನ್ನು ಸ್ಟೇಡಿಯಮ್ ನಲ್ಲಿರುವ ಸಚಿನ್ ತೆಂಡುಲ್ಕರ್ ಸ್ಟ್ಯಾಂಡ್ ನ ಪಕ್ಕದಲ್ಲಿ ಸ್ಥಾಪಿಸಲಾಗುವುದು. ಅನಾವರಣಕ್ಕೆ ಮುನ್ನ ಪ್ರತಿಮೆಗೆ ಅಂತಿಮ ಸ್ಪರ್ಶವನ್ನು ನೀಡಲಾಗುತ್ತಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸ್ವತಃ ಸಚಿನ್ ತೆಂಡುಲ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮುಂತಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರತಿಮೆಯನ್ನು ಮಹಾರಾಷ್ಟ್ರದ ಅಹ್ಮದ್ನಗರದ ಶಿಲ್ಪಿ ಪ್ರಮೋದ್ ಕಾಂಬ್ಳೆ ನಿರ್ಮಿಸಿದ್ದಾರೆ.
ಭಾರತಕ್ಕಾಗಿ ತನ್ನ ಕೊನೆಯ ಪಂದ್ಯವನ್ನು ಸಚಿನ್ 2013 ನವೆಂಬರ್ ನಲ್ಲಿ ಆಡಿದ್ದರು. ಅದಾದ ಒಂದು ದಶಕದ ಬಳಿಕ ಅವರ ಪ್ರತಿಮೆ ಸ್ಥಾಪನೆಯಾಗುತ್ತಿದೆ.