ಅಂತರ್ರಾಷ್ಟ್ರೀಯ ಬ್ಯಾಡ್ಮಿಂಟನ್ ನಿಂದ ಸಾಯಿ ಪ್ರಣೀತ್ ನಿವೃತ್ತಿ
ಕೋಚ್ ಹುದ್ದೆ ವಹಿಸಿಕೊಳ್ಳಲು ಅಮೆರಿಕಕ್ಕೆ ಪ್ರಯಾಣ
ಸಾಯಿ ಪ್ರಣೀತ್ | Photo: NDTV
ಹೈದರಾಬಾದ್: ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ವಿಜೇತ ಆಟಗಾರ ಬಿ.ಸಾಯಿ ಪ್ರಣೀತ್ ಅಂತರ್ರಾಷ್ಟ್ರೀಯ ಬ್ಯಾಡ್ಮಿಂಟನ್ ನಿಂದ ನಿವೃತ್ತಿಯಾಗುವುದಾಗಿ ಸೋಮವಾರ ಪ್ರಕಟಿಸಿದ್ದಾರೆ.
2019ರಲ್ಲಿ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ಜಯಿಸುವ ಮೂಲಕ 36 ವರ್ಷಗಳ ಭಾರತದ ಪದಕದ ಬರ ನೀಗಿಸಿದ್ದ 31ರ ಹರೆಯದ ಶಟ್ಲರ್ ಪ್ರಣೀತ್, ಸಾಕಷ್ಟು ಏರಿಳಿತ ಇರುತ್ತವೆ. ಆದರೆ ನಾನು ವೃತ್ತಿಜೀವನದಲ್ಲಿ ಏನು ಸಾಧನೆ ಮಾಡಿದ್ದೇನೆಯೋ ಆ ಬಗ್ಗೆ ಖುಷಿ ಇದೆ. ನನಗೆ ಇನ್ನಷ್ಟು ಸಾಧನೆ ಮಾಡಬಹುದಿತ್ತು. ಓರ್ವ ಶ್ರೇಷ್ಠ ಸಿಂಗಲ್ಸ್ ಆಟಗಾರನಾಗಿ ನೆನಪಿನಲ್ಲಿ ಉಳಿದಿರುವುದಕ್ಕೆ ತೃಪ್ತಿ ಇದೆ. ಒಲಿಂಪಿಕ್ಸ್ ಪದಕ ಗೆಲ್ಲದೇ ಇರುವುದು ನನಗೆ ತೀವ್ರ ಬೇಸರ ತರಿಸಿದೆ ಎಂದರು.
ಕಳೆದ 12 ತಿಂಗಳುಗಳಿಂದ ನಾನು ಉತ್ತಮ ಪ್ರದರ್ಶನ ನೀಡಿಲ್ಲ. ನನ್ನ ರ್ಯಾಂಕಿಂಗ್ ಕುಸಿದಿತ್ತು. ಕೆಲವು ಗಾಯದ ಸಮಸ್ಯೆಗಳಿದ್ದವು. ಇದು ವಿದಾಯಕ್ಕೆ ಸರಿಯಾದ ಸಮಯ ಎಂದು ಭಾವಿಸಿದ್ಧೇನೆ ಎಂದು ಪ್ರಣೀತ್ ಹೇಳಿದ್ದಾರೆ.
ಪ್ರಣೀತ್ ಇದೀಗ ಅಮೆರಿಕಕ್ಕೆ ಪ್ರಯಾಣಿಸಿ ನಾರ್ತ್ ಕರೊಲಿನಾದಲ್ಲಿ ಟ್ರಿಯಾಂಗಲ್ ಬ್ಯಾಡ್ಮಿಂಟನ್ ಅಕಾಡಮಿಗೆ ಸೇರ್ಪಡೆಯಾಗಿ ಕೋಚಿಂಗ್ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಅಮೆರಿಕದಲ್ಲಿ ಭಾರತದ ಬ್ಯಾಡ್ಮಿಂಟನ್ ಕೋಚ್ ಗಳಿಗೆ ಭಾರೀ ಬೇಡಿಕೆ ಇದ್ದು, ಶ್ಲೋಕ್ ರಾಮಚಂದ್ರನ್ ಹಾಗೂ ಮುಹಮ್ಮದ್ ಸಿಯಾದತ್ ಈಗಾಗಲೇ ಅಮೆರಿಕಕ್ಕೆ ತೆರಳಿದ್ದಾರೆ.