ಲಕ್ನೊ ವಿರುದ್ಧ ಪಂದ್ಯದಲ್ಲಿ ಸ್ಯಾಮ್ಸನ್ ಆಡುವುದು ಅನುಮಾನ?

ಸಂಜು ಸ್ಯಾಮ್ಸನ್ | PC : NDTV
ಜೈಪುರ : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಿಲ್ಲಿಯಲ್ಲಿ ಬುಧವಾರ ನಡೆದಿದ್ದ ಪಂದ್ಯದ ವೇಳೆ ಗಾಯಗೊಂಡಿರುವ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರ ಸ್ಕ್ಯಾನಿಂಗ್ ವರದಿಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದ್ದು, ಕೇರಳದ ಬ್ಯಾಟರ್ ಶನಿವಾರ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
‘‘ಸಂಜುಗೆ ಹೊಟ್ಟೆಯ ಭಾಗದಲ್ಲಿ ನೋವಿನ ಅನುಭವವಾಗಿದೆ. ಹೀಗಾಗಿ ನಾವು ಸ್ಕ್ಯಾನಿಂಗ್ ಮೊರೆ ಹೋಗಿದ್ದು, ಇಂದು ಅವರು ಕೆಲವು ಸ್ಕ್ಯಾನಿಂಗ್ಗೆ ಒಳಗಾಗಿದ್ದಾರೆ. ಆ ಸ್ಕ್ಯಾನ್ಗಳ ಫಲಿತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ. ಸ್ಕ್ಯಾನಿಂಗ್ನಲ್ಲಿ ಗಾಯದ ಗಂಭೀರತೆ ಕುರಿತು ನಮಗೆ ಸ್ಪಷ್ಟತೆ ಸಿಕ್ಕ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’’ ಎಂದು ರಾಜಸ್ಥಾನ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬುಧವಾರ ನಡೆದಿದ್ದ ಪಂದ್ಯದಲ್ಲಿ 19 ಎಸೆತಗಳಲ್ಲಿ 31 ರನ್ ಗಳಿಸಿದ್ದಾಗ ಸ್ಯಾಮ್ಸನ್ ಗಾಯಗೊಂಡು ನಿವೃತ್ತಿಯಾಗಿದ್ದರು. ವಿಪ್ರಜ್ ನಿಗಮ್ ಬೌಲಿಂಗ್ನಲ್ಲಿ ಕಟ್ ಮಾಡಲು ಯತ್ನಿಸಿದ ನಂತರ ರಾಜಸ್ಥಾನದ ನಾಯಕನಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆಗಮಿಸಿದ ಫಿಸಿಯೋ ಅವರ ಎಡ ಪಕ್ಕೆಲುಬನ್ನು ಪರೀಕ್ಷಿಸಿದರು. ಸ್ಯಾಮ್ಸನ್ ಮುಂದಿನ ಎಸೆತವನ್ನು ಎದುರಿಸಿದರು. ಆದರೆ ನಂತರ ಗಾಯಗೊಂಡು ನಿವೃತ್ತಿಯಾದರು. ಪಂದ್ಯವನ್ನು ಟೈ ಗೊಳಿಸಿದ ರಾಜಸ್ಥಾನ ತಂಡ ಸೂಪರ್ ಓವರ್ನಲ್ಲಿ ಸೋಲುಂಡಿತು.
ಸ್ಯಾಮ್ಸನ್ 2025ರ ಆವೃತ್ತಿಯ ಐಪಿಎಲ್ ಆರಂಭದಲ್ಲಿ ಹೆಬ್ಬೆರಳು ಗಾಯದಿಂದಾಗಿ ಮೊದಲ 3 ಪಂದ್ಯಗಳಲ್ಲಿ ಬ್ಯಾಟರ್ ಆಗಿ ಮಾತ್ರ ಆಡಿದ್ದರು. ಆಗ ರಿಯಾನ್ ಪರಾಗ್ ರಾಜಸ್ಥಾನ ತಂಡದ ನಾಯಕನಾಗಿದ್ದರು. ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ಪರಾಗ್ ಮತ್ತೊಮ್ಮೆ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
ಸ್ಯಾಮ್ಸನ್ ರಾಜಸ್ಥಾನ ಆಡಿರುವ ಮೊದಲ 3 ಪಂದ್ಯಗಳಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಆಡಿದ್ದರು. ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನ ಅನುಮತಿಯ ನಂತರ ನಾಯಕ ಹಾಗೂ ವಿಕೆಟ್ಕೀಪರ್ ಆಗಿ ತಂಡಕ್ಕೆ ವಾಪಸಾಗಿದ್ದರು. ಕಳೆದ ತಿಂಗಳು ಬೆರಳಿನ ಸರ್ಜರಿಗೆ ಒಳಗಾಗಿದ್ದ ಸ್ಯಾಮ್ಸನ್ ಬದಲಿಗೆ ಧ್ರುವ್ ಜುರೆಲ್ ವಿಕೆಟ್ಕೀಪಿಂಗ್ ಮಾಡಿದ್ದರು.