ಪತ್ರಿಕಾಗೋಷ್ಠಿಗಳಿಂದ ಗಂಭೀರ್ ರನ್ನು ದೂರವಿಡಿ : ಸಂಜಯ್ ಮಾಂಜ್ರೇಕರ್ ಸಲಹೆ
ಗೌತಮ್ ಗಂಭೀರ್ | PC : PTI
ಹೊಸದಿಲ್ಲಿ : ಹಾಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾಧ್ಯಮದೊಂದಿಗೆ ಮಾತನಾಡುವಾಗ ಅವರ ನಡವಳಿಕೆ, ಮಾತು ಸರಿಯಾಗಿರಲಿಲ್ಲ. ಬಿಸಿಸಿಐ ಇಂತಹ ಕೆಲಸದಿಂದ ಅವರನ್ನು ದೂರ ಇಡಬೇಕು ಎಂದು ಭಾರತದ ಮಾಜಿ ಬ್ಯಾಟರ್ ಸಂಜಯ್ ಮಾಂಜ್ರೇಕರ್ ಸಲಹೆ ನೀಡಿದ್ದಾರೆ.
ಟೀಮ್ ಇಂಡಿಯಾವು ಸೋಮವಾರ ಆಸ್ಟ್ರೇಲಿಯ ಪ್ರವಾಸಕ್ಕೆ ಹೊರಡುವ ಮೊದಲು ಮಾಧ್ಯಮದೊಂದಿಗೆ ಸಂವಾದ ನಡೆಸಿದ 43ರ ವಯಸ್ಸಿನ ಗಂಭೀರ್, ಎಂದಿನ ಶೈಲಿಯಲ್ಲಿ ಉದ್ದಟತನದಿಂದ ಮಾತನಾಡಿದ್ದರು.
ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಬಗ್ಗೆ ಆಸ್ಟ್ರೇಲಿಯದ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ರ ಹೇಳಿಕೆಯ ಕುರಿತು ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಂಭೀರ್, ರಿಕಿ ಪಾಂಟಿಂಗ್ಗೂ ಭಾರತೀಯ ಕ್ರಿಕೆಟ್ಗೂ ಏನು ಸಂಬಂಧ ಇದೆ? ಅವರು ಆಸ್ಟ್ರೇಲಿಯದ ಕ್ರಿಕೆಟ್ ಬಗ್ಗೆ ಯೋಚಿಸಲಿ ಎಂದಿದ್ದರು.
ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ ಭಾರತ ಕ್ರಿಕೆಟ್ ತಂಡವು ಟೆಸ್ಟ್ ಸರಣಿಯನ್ನು 0-3 ಅಂತರದಿಂದ ಸೋತ ಕಾರಣ ತಾನು ಒತ್ತಡದಲ್ಲಿದ್ದೇನೆ ಎನ್ನುವುದನ್ನು ನಿರಾಕರಿಸಿದ ಗಂಭೀರ್, ವರದಿಗಾರರಿಗೆ ಮರು ಪ್ರಶ್ನಿಸಿದರು. ಸಾಮಾಜಿಕ ಮಾಧ್ಯಮವು ನನ್ನ ಜೀವನದಲ್ಲಾಗಲಿ, ಬೇರೆ ಯಾರ ಜೀವನದಲ್ಲಾಗಲಿ ಏನು ಬದಲಾವಣೆ ಮಾಡುತ್ತದೆ? ನಾನು ಕೋಚ್ ಹುದ್ದೆಯನ್ನು ವಹಿಸಿಕೊಂಡಾಗ ಇದು ಅತ್ಯಂತ ಕಠಿಣ ಕೆಲಸ ಹಾಗೂ ಪ್ರತಿಷ್ಠಿತ ಕೆಲಸ ಎಂದು ನನಗೆ ಮೊದಲೇ ತಿಳಿದಿತ್ತು ಎಂದರು.
ಗಂಭೀರ್ ಅವರ ಈ ರೀತಿಯ ಉತ್ತರವನ್ನು ಉಲ್ಲೇಖಿಸಿರುವ ಮಾಂಜ್ರೇಕರ್, ಬಿಸಿಸಿಐ, ಗಂಭೀರ್ ಅವರನ್ನು ಮಾಧ್ಯಮದ ಮುಂದೆ ಕೂರಿಸಬಾರದು. ನಾಯಕ ರೋಹಿತ್ ಶರ್ಮಾ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಇದಕ್ಕೆ ಸೂಕ್ತ ಆಯ್ಕೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.