‘ಮುಂಬೈ ಮಾದರಿಯ ಬ್ಯಾಟಿಂಗ್’ಗೆ ಸಡ್ಡು ಹೊಡೆದ ಸರ್ಫರಾಝ್!
ಸಂಜಯ್ ಮಾಂಜ್ರೇಕರ್ರ ಕುತೂಹಲಕರ ವರ್ಣನೆ
ಸರ್ಫರಾಝ್ | PTI
ಬೆಂಗಳೂರು : ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಸರ್ಫರಾಝ್ ಖಾನ್ ಶನಿವಾರ ತನ್ನ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಝಿಲ್ಯಾಂಡ್ ವಿರುದ್ಧದ ಪ್ರಥಮ ಟೆಸ್ಟ್ನಲ್ಲಿ ಅತ್ಯಂತ ಮಹತ್ವದ ಘಟ್ಟದಲ್ಲಿ ಅವರು ಬಾರಿಸಿರುವ ಶತಕವು ಅದರ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಪಂದ್ಯದ ನಾಲ್ಕನೇ ದಿನದಂದು ಭಾರತೀಯ ಪ್ರತಿ ಹೋರಾಟದ ನೇತೃತ್ವದ ವಹಿಸಿದ ಸರ್ಫರಾಝ್, ಎದುರಾಳಿ ಬೌಲರ್ಗಳ ದಾಳಿಯನ್ನು ಚಿಂದಿ ಉಡಾಯಿಸಿದರು. ಅವರು ಕೇವಲ 110 ಎಸೆತಗಳಲ್ಲಿ ಶತಕ ಬಾರಿಸಿದರು.
ಅಂತಿಮವಾಗಿ ಅವರು 195 ಎಸೆತಗಳಲ್ಲಿ 150 ರನ್ಗಳನ್ನು ಪೇರಿಸಿ ನಿರ್ಗಮಿಸಿದರು. ಅವರ ಶತಕ ಮತ್ತು ರಿಶಭ್ ಪಂತ್ರ 99 ರನ್ಗಳ ನೆರವಿನಿಂದ ಭಾರತ ಇನಿಂಗ್ಸ್ ಸೋಲಿನಿಂದ ಪಾರಾಗುವಲ್ಲಿ ಯಶಸ್ವಿಯಾಗಿದೆ.
ಸರ್ಫರಾಝ್ ಶತಕದ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಕುತೂಹಲಕರ ಹೇಳಿಕೆಯೊಂದನ್ನು ನೀಡಿದ್ದಾರೆ. ‘‘ಸರ್ಫರಾಝ್ ಕೊನೆಗೂ ‘ಮುಂಬೈ ಮಾದರಿಯ ಬ್ಯಾಟಿಂಗ್’ಗೆ ಸಡ್ಡು ಹೊಡೆದ ರೀತಿಯನ್ನು ನಾನು ಇಷ್ಟಪಡುತ್ತೇನೆ. ಇಲ್ಲಿ ಬೇಕಾಗಿರುವುದು ರನ್ಗಳು. ರನ್ಗಳನ್ನು ಹೇಗೆ ಗಳಿಸಬೇಕು ಎನ್ನುವುದು ಈ ಹುಡುಗನಿಗೆ ಗೊತ್ತು’’ ಎಂಬುದಾಗಿ ಮಾಂಜ್ರೇಕರ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಮಾಂಜ್ರೇಕರ್ ಮುಂಬೈ ಪರವಾಗಿ ರಾಷ್ಟ್ರ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾರೆ ಎನ್ನುವುದು ಗಮನಾರ್ಹವಾಗಿದೆ. ಸಚಿನ್ ತೆಂಡುಲ್ಕರ್ ಕೂಡ ಈ ‘ಮುಂಬೈ ಮಾದರಿಯ ಬ್ಯಾಟಿಂಗ್’ಗೆ ಸೇರಿದವರು.