ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಟೂರ್ನಿಯಿಂದ ಹಿಂದೆ ಸರಿದ ಸಾತ್ವಿಕ್-ಚಿರಾಗ್
PC : PTI
ಹೊಸದಿಲ್ಲಿ: ಭಾರತದ ಪ್ರಮುಖ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಮೆಂಟ್ನಿಂದ ಮಂಗಳವಾರ ಹಿಂದೆ ಸರಿದಿದ್ದಾರೆ.
ಚಿರಾಗ್ಗೆ ಕೊನೆಯ ಕ್ಷಣದಲ್ಲಿ ಫಿಟ್ನೆಸ್ ಸಮಸ್ಯೆ ಎದುರಿಸಿದ್ದು, ಅವರು ಯಾವುದೇ ರಿಸ್ಕ್ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ಸ್ಪೋರ್ಟ್ಸ್ಸ್ಟಾರ್ ವರದಿ ಮಾಡಿದೆ.
ವಿಶ್ವದ ಮಾಜಿ ನಂ.1 ಡಬಲ್ಸ್ ಜೋಡಿ ಟೂರ್ನಮೆಂಟ್ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಟೀಮ್ ಆಗಿ ಹೊರಹೊಮ್ಮಿತ್ತು. ಮೊದಲ ಸುತ್ತಿನಲ್ಲಿ ಚೀನಾದ ಚೆನ್ ಕ್ಸು ಜುನ್ ಹಾಗೂ ಗು ರುವೊ ಹಾನ್ ರನ್ನು ಎದುರಿಸಲಿದೆ. ಆದರೆ ಭಾರತದ ಜೋಡಿ ಇದೀಗ ಚೀನಾದ ಜೋಡಿಗೆ ವಾಕ್ ಓವರ್ ನೀಡಿದೆ.
ಚಿರಾಗ್-ಸಾತ್ವಿಕ್ ಇತ್ತೀಚೆಗೆ ಚೀನಾ ಮಾಸ್ಟರ್ಸ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಜಿನ್ ಯಂಗ್ ಹಾಗೂ ಸೆವೊ ಸೆವುಂಗ್ ಎದುರು 18-21, 21-14, 16-21 ಗೇಮ್ಗಳ ಅಂತರದಿಂದ ಸೋತಿತ್ತು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಿರಾಶಾದಾಯಕ ಅಭಿಮಾನ ನಡೆಸಿದ ನಂತರ ಚಿರಾಗ್-ಸಾತ್ವಿಕ್ ಆಡಿರುವ ಮೊದಲ ಟೂರ್ನಿ ಇದಾಗಿತ್ತು.