ಸೌದಿ ಅರೇಬಿಯಾಗೆ 2034ರ ಫಿಫಾ ವಿಶ್ವಕಪ್ ಆತಿಥ್ಯ
2030ರ ಫಿಫಾ ವಿಶ್ವಕಪ್ನ ಸಹ ಆತಿಥ್ಯ ವಹಿಸಲಿರುವ ಆರು ದೇಶಗಳು
PC : X@FIFAcom
ಹೊಸದಿಲ್ಲಿ: 2034ರ ಫಿಫಾ ಪುರುಷರ ಫುಟ್ಬಾಲ್ ವಿಶ್ವಕಪ್ ಆತಿಥ್ಯ ಸೌದಿ ಅರೇಬಿಯಾದ ಪಾಲಾಗಿದೆ. ಇದರಿಂದ ಸೌದಿ ಅರೇಬಿಯಾದ ಕ್ರೀಡಾ ಕ್ಷೇತ್ರದಲ್ಲಿನ ಹೂಡಿಕೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ.
ಝೂರಿಚ್ ನಲ್ಲಿ ಫಿಫಾ ಅಧ್ಯಕ್ಷ ಗ್ಯಾನಿ ಇನ್ಫ್ಯಾಂಟಿನೊ ನೇತೃತ್ವದಲ್ಲಿ ನಡೆದ ವರ್ಚುಯಲ್ ಸಭೆಯಲ್ಲಿ ಭಾಗವಹಿಸಿದ್ದ 200ಕ್ಕೂ ಹೆಚ್ಚು ಫಿಫಾ ಸದಸ್ಯರು, 2034ರ ವಿಶ್ವಕಪ್ ಆತಿಥ್ಯಕ್ಕೆ ಸೌದಿ ಅರೇಬಿಯಾ ಹೊರತುಪಡಿಸಿ ಬೇರೆ ಯಾರೂ ಬಿಡ್ ಸಲ್ಲಿಸದೆ ಇದ್ದುದರಿಂದ ಸರ್ವಾನುಮತದಿಂದ ಸೌದಿ ಅರೇಬಿಯಾಗೆ ವಿಶ್ವಕಪ್ ಆತಿಥ್ಯ ನೀಡಲು ಅನುಮೋದಿಸಿದರು.
ಇದೇ ವೇಳೆ, 2030ರ ಫಿಫಾ ಪುರುಷರ ಫುಟ್ಬಾಲ್ ವಿಶ್ವಕಪ್ನ ಆತಿಥ್ಯವನ್ನು ಆರು ದೇಶಗಳಿಗೆ ಜಂಟಿಯಾಗಿ ವಹಿಸಲಾಗಿದೆ. 2030ರ ವಿಶ್ವಕಪ್ ಆತಿಥ್ಯ ವಹಿಸಲು ಸ್ಪೇನ್, ಪೋರ್ಚುಗಲ್ ಹಾಗೂ ಮೊರೊಕ್ಕೊ ಜಂಟಿಯಾಗಿ ಬಿಡ್ ಸಲ್ಲಿಸಿದ್ದವು. ಇದರೊಂದಿಗೆ ಅರ್ಜೆಂಟೀನಾ, ಪೆರುಗ್ವೆ ಹಾಗೂ ಉರುಗ್ವೆ ದೇಶಗಳೂ ಈ ಬಿಡ್ನಲ್ಲಿ ಸೇರ್ಪಡೆಯಾಗಲು ಯಶಸ್ವಿಯಾಗಿದ್ದು, ಪ್ರತಿ ದೇಶವೂ ಈ ಕ್ರೀಡಾಕೂಟದ ಒಂದೊಂದು ಹಂತವನ್ನು ಆಯೋಜಿಸುವ ಮೂಲಕ, ಈ ಕ್ರೀಡಾಕೂಟವನ್ನು ಆರು ದೇಶಗಳ ಯೋಜನೆಯನ್ನಾಗಿಸಲಿವೆ.