ಜರ್ಮನಿ ವಿರುದ್ಧ ಎರಡನೇ ಗ್ರೂಪ್ ಪಂದ್ಯ ರದ್ದು: ಸಾತ್ವಿಕ್-ಚಿರಾಗ್ ಶೆಟ್ಟಿಗೆ ಇಂಡೋನೇಶ್ಯದ ವಿರುದ್ಧ ಗೆಲ್ಲಲೇಬೇಕಾದ ಪಂದ್ಯ
ಸಾತ್ವಿಕ್-ಚಿರಾಗ್ ಶೆಟ್ಟಿ | PTI
ಪ್ಯಾರಿಸ್: ಜರ್ಮನಿ ವಿರುದ್ಧದ 2ನೇ ಸಿ ಗುಂಪಿನ ಪಂದ್ಯವು ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಪ್ಯಾರಿಸ್ ಒಲಿಂಪಿಕ್ಸ್ನ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.
ಮೊಣಕಾಲಿನ ಗಾಯದಿಂದಾಗಿ ಜರ್ಮನಿಯ ಆಟಗಾರ ಮಾರ್ಕ್ ಲ್ಯಾಮ್ಸ್ಫಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸಿ ಗುಂಪಿನಲ್ಲಿ ಜರ್ಮನಿ ಒಳಗೊಂಡಿರುವ ಪಂದ್ಯಗಳು ರದ್ದುಗೊಂಡಿವೆ ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ(ಬಿಡಬ್ಲ್ಯುಎಫ್)ಪ್ರಕಟಿಸಿದೆ.
ತನ್ನ ಮೊಣಕಾಲಿನ ಗಾಯದಿಂದಾಗಿ ಜರ್ಮನಿ ಆಟಗಾರ ಮಾರ್ಕ್ ಲ್ಯಾಮ್ಸ್ಫಸ್ ಹಿಂದೆ ಸರಿದಿದ್ದಾರೆ ಎಂದು ಬಿಡಬ್ಲ್ಯುಎಫ್ ಹೇಳಿಕೆಯು ದೃಢಪಡಿಸಿದೆ. ಇದರ ಪರಿಣಾಮವಾಗಿ ಭಾರತೀಯ ಜೋಡಿ ಹಾಗೂ ಫ್ರಾನ್ಸ್ನ ಲುಕಾಸ್ ಕಾರ್ವಿ ಹಾಗೂ ರೊನಾನ್ ಲ್ಯಾಬರ್ ವಿರುದ್ಧದ ಉಳಿದಿರುವ ಸಿ ಗುಂಪಿನ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಜರ್ಮನಿ ಜೋಡಿ ಒಳಗೊಂಡಿರುವ ಎಲ್ಲ ಗ್ರೂಪ್ ಪಂದ್ಯದ ಫಲಿತಾಂಶಗಳನ್ನು ರದ್ದುಗೊಳಿಸಲಾಗಿದೆ.
ಸಾತ್ವಿಕ್ ಹಾಗೂ ಚಿರಾಗ್ ಫ್ರಾನ್ಸ್ನ ಲುಕಾಸ್ ಕಾರ್ವೀ ಹಾಗೂ ರೊನಾನ್ ಲ್ಯಾಬರ್ ವಿರುದ್ಧ 46 ನಿಮಿಷಗಳಲ್ಲಿ ಕೊನೆಗೊಂಡಿರುವ ಪಂದ್ಯವನ್ನು 21-17, 21-14 ಅಂತರದಿಂದ ಗೆದ್ದುಕೊಂಡು ಒಲಿಂಪಿಕ್ಸ್ನಲ್ಲಿ ತಮ್ಮ ಪಯಣ ಆರಂಭಿಸಿದ್ದರು.
ಸಾತ್ವಿಕ್ ಹಾಗೂ ಚಿರಾಗ್ ವಿಶ್ವದ ನಂ.31ನೇ ಆಟಗಾರ ಹಾಗೂ 2022ರ ಯುರೋಪಿಯನ್ ಬ್ಯಾಡ್ಮಿಂಟನ್ನ ಪುರುಷರ ಡಬಲ್ಸ್ ಚಾಂಪಿಯನ್ ಮರ್ವಿನ್ ಸಿಡೆಲ್ ಹಾಗೂ ಮಾರ್ಕ್ ಲ್ಯಾಮ್ಫಸ್ರನ್ನು ಎದುರಿಸಬೇಕಾಗಿತ್ತು. ಆದರೆ ಗಾಯದ ಸಮಸ್ಯೆಯ ಕಾರಣಕ್ಕೆ ಈ ಪಂದ್ಯ ರದ್ದಾಗಿದೆ.
ಸಾತ್ವಿಕ್ ಹಾಗೂ ಚಿರಾಗ್ಗೆ ಮುಂದಿನ ಸುತ್ತಿಗೇರಲು ಮುಂದಿನ ಗ್ರೂಪ್ ಪಂದ್ಯವು ನಿರ್ಣಾಯಕವಾಗಿದ್ದು, ಮಂಗಳವಾರ ಇಂಡೋನೇಶ್ಯದ ಜೋಡಿ ಫಜರ್ ಅಲ್ಫಿಯಾನ್ ಹಾಗೂ ಮುಹಮ್ಮದ್ ರಿಯಾನ್ರನ್ನು ಎದುರಿಸಲಿದ್ದಾರೆ.
ಇಂಡೋನೇಶ್ಯದ ಜೋಡಿಯು ಮಾಜಿ ವಿಶ್ವದ ನಂ.1 ಆಗಿದ್ದು ಸದ್ಯ ವಿಶ್ವದ ನಂ.7ನೇ ಜೋಡಿಯಾಗಿದೆ. 2019 ಹಾಗೂ 2022ರಲ್ಲಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಜಯಿಸಿದೆ. 2020ರಲ್ಲಿ ಇಂಡೋನೇಶ್ಯದ ಥಾಮಸ್ ಕಪ್ ವಿಜೇತ ತಂಡದ ಭಾಗವಾಗಿತ್ತು. ಭಾರತ ಹಾಗೂ ಇಂಡೋನೇಶ್ಯದ ಜೋಡಿ ಪರಸ್ಪರ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಭಾರತೀ ಯ ಜೋಡಿ 3 ಬಾರಿ ಗೆಲುವು ದಾಖಲಿ ಅಲ್ಪ ಮುನ್ನಡೆಯಲ್ಲಿದೆ. 2023ರಲ್ಲಿ ಕೊರಿಯನ್ ಓಪನ್ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದಾಗ ಸಾತ್ವಿಕ್-ಚಿರಾಗ್ ಜಯಶಾಲಿಯಾಗಿದ್ದರು.