ದ್ವಿತೀಯ ಏಕದಿನ: ವಿಂಡೀಸ್ ವಿರುದ್ಧ ಆಸ್ಟ್ರೇಲಿಯಕ್ಕೆ ವಿಜಯ, ಸರಣಿ ಕೈವಶ
Photo: NDTV
ಸಿಡ್ನಿ : ಸೀನ್ ಅಬಾಟ್ ಆಲ್ರೌಂಡ್ ಆಟದ (69 ರನ್, 3-40) ಸಹಾಯದಿಂದ ವೆಸ್ಟ್ಇಂಡೀಸ್ ವಿರುದ್ಧ ಎರಡನೇ ಏಕದಿನ ಅಂತರ್ರಾಷ್ಟ್ರೀಯ ಪಂದ್ಯವನ್ನು 83 ರನ್ನಿಂದ ಗೆದ್ದುಕೊಂಡಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡ ಮೂರು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಿಂದ ಗೆದ್ದುಕೊಂಡಿದೆ.
ರವಿವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯದ 9ಕ್ಕೆ 258 ರನ್ ಗೆ ಉತ್ತರವಾಗಿ ವೆಸ್ಟ್ಇಂಡೀಸ್ 44ನೇ ಓವರ್ ನಲ್ಲಿ 175 ರನ್ ಗಳಿಸಿ ಆಲೌಟಾಯಿತು.
ಅಬಾಟ್(3-40) ಅವರು ಜೋಶ್ ಹೇಝಲ್ವುಡ್(3-43) ಹಾಗೂ ಸದರ್ಲ್ಯಾಂಡ್(2-28) ಜೊತೆಗೂಡಿ ವಿಂಡೀಸ್ ಬ್ಯಾಟರ್ ಗಳನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದರು.
ಏಕದಿನ ಕ್ರಿಕೆಟ್ ನಲ್ಲಿ ಸತತ 11ನೇ ಪಂದ್ಯವನ್ನು ಜಯಿಸಿರುವ ಆಸ್ಟ್ರೇಲಿಯವು ಮಂಗಳವಾರ ಕ್ಯಾನ್ಬೆರಾದಲ್ಲಿ ಇನ್ನೂ ಒಂದು ಪಂದ್ಯ ಆಡಲು ಬಾಕಿ ಇರುವಾಗಲೇ ಸರಣಿ ವಶಪಡಿಸಿಕೊಂಡಿದೆ.
ಮೆಲ್ಬರ್ನ್ನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಆಸ್ಟ್ರೇಲಿಯ ತಂಡವು 8 ವಿಕೆಟ್ ನಿಂದ ಗೆದ್ದುಕೊಂಡಿತ್ತು. ವಿಂಡೀಸ್ ಎರಡನೇ ಪಂದ್ಯದಲ್ಲಿ ಅತ್ಯಂತ ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದರೂ ಬ್ಯಾಟರ್ ಗಳು ಆಸ್ಟ್ರೇಲಿಯದ ತಂಡದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸುವಲ್ಲಿ ಎಡವಿದರು. ಕೀಸಿ ಕಾರ್ಟಿ(40 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.
ಅಲಿಕ್ ಅಥನಾಝ್ ಸತತ ಬೌಂಡರಿ ಗಳಿಸಿ ವಿಂಡೀಸ್ ರನ್ ಚೇಸ್ ಗೆ ಚಾಲನೆ ನೀಡಿದರು. ಆದರೆ ಅವರು 11 ರನ್ ಗಳಿಸಿ ಔಟಾದರು. ಇನ್ನೋರ್ವ ಆರಂಭಿಕ ಬ್ಯಾಟರ್ ಜಸ್ಟಿನ್ ಗ್ರೀವ್ಸ್(8 ರನ್)ಮುಂದಿನ ಓವರ್ಗೆ ಹೇಝಲ್ವುಡ್ ಗೆ ವಿಕೆಟ್ ಒಪ್ಪಿಸಿದರು. ಜೋರ್ನ್ ಒಟ್ಲೆ(8 ರನ್) ವಿಕೆಟ್ ಒಪ್ಪಿಸಿದಾಗ ವಿಂಡೀಸ್ 34 ರನ್ ಗೆ 3 ವಿಕೆಟ್ ಕಳೆದುಕೊಂಡಿತು. ನಾಯಕ ಹೋಪ್ ಹಾಗೂ ಕೀಸಿ ಕಾರ್ಟಿ 53 ರನ್ ಜೊತೆಯಾಟದಿಂದ ತಂಡವನ್ನು ಮೇಲೆತ್ತಿದರು. ಹೇಝಲ್ವುಡ್ ಅವರು ಹೋಪ್(29 ರನ್) ಹಾಗೂ ಅಬಾಟ್ ಅವರು ಕಾರ್ಟಿ(40 ರನ್)ವಿಕೆಟನ್ನು ಪಡೆದು ವಿಂಡೀಸ್ 108 ರನ್ ಗೆ 5ನೇ ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯವು 167 ರನ್ ಗೆ 7 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಬಾಟ್(69 ರನ್, 63 ಎಸೆತ, 1 ಬೌಂಡರಿ, 4 ಸಿಕ್ಸರ್)ಅರ್ಧಶತಕದ ನೆರವಿನಿಂದ ಗೌರವಾರ್ಹ ಮೊತ್ತ ಗಳಿಸಿತು. ಮೊದಲ ಪಂದ್ಯದಲ್ಲಿ 149 ರನ್ ಜೊತೆಯಾಟ ನಡೆಸಿದ್ದ ಕ್ಯಾಮರೂನ್ ಗ್ರೀನ್ ಹಾಗೂ ಸ್ಟೀವ್ ಸ್ಮಿತ್(5 ರನ್) ಎರಡನೇ ಪಂದ್ಯದಲ್ಲಿ ಆ ಪ್ರದರ್ಶನ ಪುನರಾವರ್ತಿಸುವಲ್ಲಿ ವಿಫಲರಾದರು.
ಸ್ಮಿತ್ ವಿಕೆಟ್ ಒಪ್ಪಿಸಿದಾಗ ಆಸ್ಟ್ರೇಲಿಯವು 50 ರನ್ ಗೆ 3 ವಿಕೆಟ್ ಗಳನ್ನು ಕಳೆದುಕೊಂಡಿತು. ಗ್ರೀನ್(33 ರನ್) ಮಾರ್ ನಸ್ ಲ್ಯಾಬುಶೇನ್(26ರನ್) ಅವರೊಂದಿಗೆ 39 ರನ್ ಸೇರಿಸಿ ಇನಿಂಗ್ಸ್ ಆಧರಿಸಿದರು.
ಲಾಬುಶೇನ್ (26 ರನ್) ಮತ್ತೊಮ್ಮೆ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಸ್ಪಿನ್ನರ್ ಗುಡಕೇಶ್ ಡೇಂಜರ್ಮ್ಯಾನ್ ಆ್ಯರೊನ್ ಹಾರ್ಡಿ(26 ರನ್) ಹಾಗೂ ಮ್ಯಾಟ್ ಶಾರ್ಟ್(41 ರನ್)ವಿಕೆಟ್ ಉರುಳಿಸುವ ಮೊದಲು ಲಾಬುಶೇನ್ ವಿಕೆಟ್ ಪಡೆದರು.
ಎರಡನೇ ಅರ್ಧಶತಕ ಗಳಿಸಿದ ಅಬಾಟ್ ಚೊಚ್ಚಲ ಪಂದ್ಯವನ್ನಾಡಿದ ಬೌಲರ್ ವಿಲ್ ಸದರ್ಲ್ಯಾಂಡ್(18ರನ್) ಅವರೊಂದಿಗೆ 57 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 258ಕ್ಕೆ ತಲುಪಿಸಿದರು.