ದ್ವಿತೀಯ ಏಕದಿನ ಪಂದ್ಯ | ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್ ಗಳ ಜಯ
ರೋಹಿತ್ ಶರ್ಮಾ ಆಕರ್ಷಕ ಶತಕ, ಶುಭಮನ್ ಗಿಲ್ ಅರ್ಧ ಶತಕ

Photo : BCCI
ಕಟಕ್ : ಅಗ್ರ ಸರದಿಯ ಆಟಗಾರ ನಾಯಕ ರೋಹಿತ್ ಶರ್ಮ (119 ರನ್, 90 ಎಸೆತ,12 ಬೌಂಡರಿ, 7 ಸಿಕ್ಸರ್ ) ಶತಕ, ಶುಭಮನ್ ಗಿಲ್ (60 ರನ್, 52 ಎಸೆತ, 9 ಬೌಂಡರಿ, 1 ಸಿಕ್ಸರ್ ) ಅರ್ಧಶತಕದ ಕೊಡುಗೆ ಹಾಗೂ ರವೀಂದ್ರ ಜಡೇಜ ಉತ್ತಮ ಬೌಲಿಂಗ್ ನೆರವಿನಿಂದ ಟೀಮ್ ಇಂಡಿಯಾವು ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನು 4 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಕಟಕ್ ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತಕ್ಕೆ ಇಂಗ್ಲೆಂಡ್ 304 ರನ್ ಗಳ ಗುರಿ ನೀಡಿತು.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 304 ರನ್ ಗುರಿ ಬೆನ್ನಟ್ಟಿದ ಭಾರತ ತಂಡವು ಉತ್ತಮ ಪ್ರದರ್ಶನ ತೋರಿತು.ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮ ಹಾಗೂ ಶುಭಮನ್ ಗಿಲ್ ಉತ್ತಮ ಪ್ರದರ್ಶನ ನೀಡಿದರು. ಕ್ರೀಡಾಂಗಣದಲ್ಲಿ ಫ್ಲಡ್ ಲೈಟ್ ಗಳು ಸ್ಥಗಿತಗೊಂಡ ಕಾರಣ ಕೆಲಕಾಲ ಆಟವನ್ನು ನಿಲ್ಲಿಸಲಾಗಿತ್ತು.
ಪುನಃ ಬ್ಯಾಟಿಂಗ್ ಮಾಡಿದ ರೋಹಿತ್ 90 ಎಸೆತಗಳಲ್ಲಿ 7 ಸಿಕ್ಸರ್, 12 ಬೌಂಡರಿ ನೆರವಿನಿಂದ 119 ರನ್ ಗಳಿಸಿ ಶತಕ ಪೂರೈಸಿ ಔಟ್ ಆದರು. 2ನೇ ಕ್ರಮಾಂಕದ ಆಟಗಾರ ಶುಭನ್ ಗಿಲ್ 52 ಎಸೆತಗಳಲ್ಲಿ 9 ಬೌಂಡರಿ 1 ಸಿಕ್ಸರ್ ಜೊತೆಗೆ 60 ರನ್ ಗಳಿಸಿ ಔಟ್ ಆದರು.
ನಂತರದ ಕ್ರಮಾಂಕದಲ್ಲಿ ಬಂದ ಕೊಹ್ಲಿ 8 ಬೌಲ್ಗಳಲ್ಲಿ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಅಯ್ಯರ್ 47 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್ ಹೊಡೆದು 44 ರನ್ ಗಳಿಸಿ ಔಟ್ ಆದರೇ, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ತಲಾ 10 ರನ್ ಮಾಡಿ ಔಟ್ ಆದರು.
ನಂತರ ತಂಡಕ್ಕೆ ಆಸರೆಯಾದ ಅಕ್ಷರ್ ಪಟೇಲ್ ಔಟ್ ಆಗದೇ 43 ಎಸೆತಗಳಲ್ಲಿ 4 ಬೌಂಡರಿ ಹೊಡೆದು 41 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಸಾಗಿಸಿದರು. ಇವರಿಗೆ ಜೊತೆಯಾಗಿ ರವೀಂದ್ರ ಜಡೇಜಾ 7 ಬೌಲ್ ಗಳಲ್ಲಿ 11 ರನ್ ಹೊಡೆದು ತಂಡವನ್ನು ಗೆಲುವಿನತ್ತ ಸಾಗಿಸಿದರು.