ದ್ವಿತೀಯ ಟೆಸ್ಟ್: ನ್ಯೂಝಿಲ್ಯಾಂಡ್ 211 ರನ್ ಗೆ ಆಲೌಟ್
ದಕ್ಷಿಣ ಆಫ್ರಿಕಾಕ್ಕೆ ಅಲ್ಪ ಮುನ್ನಡೆ, ಒಂದೇ ದಿನ 14 ವಿಕೆಟ್ ಗಳು ಪತನ
PTI : PTI
ಜೋಹಾನ್ಸ್ ಬರ್ಗ್: ಡೆನ್ ಪಿಯೆಟ್(5-89)ಜೀವನಶ್ರೇಷ್ಠ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ನ್ಯೂಝಿಲ್ಯಾಂಡ್ ತಂಡವನ್ನು ದ್ವಿತೀಯ ಟೆಸ್ಟ್ ಪಂದ್ಯದ 2ನೇ ದಿನವಾದ ಬುಧವಾರ 211 ರನ್ನಿಂದ ಆಲೌಟ್ ಮಾಡಿದೆ. 31 ರನ್ ಅಲ್ಪ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.
6 ವಿಕೆಟ್ ಗಳ ನಷ್ಟಕ್ಕೆ 220 ರನ್ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ 242 ರನ್ ಗಳಿಸಿ ಆಲೌಟ್ ಆಗಿದೆ. ತನ್ನ ಮೊದಲ ಇನಿಂಗ್ಸ್ ಆರಂಭಿಸಿರುವ ನ್ಯೂಝಿಲ್ಯಾಂಡ್ 31 ರನ್ ಮುನ್ನಡೆ ಬಿಟ್ಟುಕೊಟ್ಟಿದ್ದು, ಒಂದೇ ದಿನ 14 ವಿಕೆಟ್ ಗಳು ಪತನಗೊಂಡಿವೆ.
ನ್ಯೂಝಿಲ್ಯಾಂಡ್ 9 ವಿಕೆಟ್ ಗಳ ನಷ್ಟಕ್ಕೆ 183 ರನ್ ಗಳಿಸಿತ್ತು. ನೀಲ್ ವಾಗ್ ನರ್ ಇನಿಂಗ್ಸ್ ಅಂತ್ಯದಲ್ಲಿ 27 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 33 ರನ್ ಗಳಿಸಿ ತಂಡದ ಸ್ಕೋರನ್ನು 200ರ ಗಡಿ ದಾಟಿಸಿದರು.
ಆಫ್ ಸ್ಪಿನ್ನರ್ ಡೀನ್ ಪಿಯೆಟ್ ಅವರು ಟಾಮ್ ಲ್ಯಾಥಮ್, ಕೇನ್ ವಿಲಿಯಮ್ಸನ್, ವಿಲ್ ಯಂಗ್ , ಗ್ಲೆನ್ ಫಿಲಿಪ್ಸ್ ಹಾಗೂ ನೀಲ್ ವಾಗ್ ನರ್ ವಿಕೆಟ್ ಗಳನ್ನು ಪಡೆದು ದಕ್ಷಿಣ ಆಫ್ರಿಕಾದ ಪರ ಶ್ರೇಷ್ಠ ಪ್ರದರ್ಶನ ನೀಡಿದರು. ನ್ಯೂಝಿಲ್ಯಾಂಡ್ ಇನಿಂಗ್ಸ್ ನ ಮೊದಲ ಓವರ್ ನಲ್ಲಿ ಡಿವೊನ್ ಕಾನ್ವೆ(0)ವಿಕೆಟನ್ನು ಪಡೆದಿರುವ ಡೇನ್ ಪೀಟರ್ಸನ್ 39 ರನ್ ಗೆ 3 ವಿಕೆಟ್ ಗಳನ್ನು ಕಬಳಿಸಿದರು.
ಸೆಡ್ಡನ್ ಪಾರ್ಕ್ನಲ್ಲಿ ಎರಡನೇ ದಿನದಾಟದಲ್ಲಿ ಅಸ್ಥಿರ ಬೌನ್ಸ್ ಕಂಡುಬಂದಿದ್ದು ಎರಡೂ ತಂಡಗಳ ತಲಾ ಇಬ್ಬರು ಬ್ಯಾಟರ್ ಗಳು ಇನ್ಸೈಡ್ ಎಡ್ಜ್ಗೆ ವಿಕೆಟ್ ಒಪ್ಪಿಸಿದರು.
ಮಂಗಳವಾರ ಮೊದಲ ದಿನದಾಟದಂತ್ಯಕ್ಕೆ 7ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ ರುವಾನ್ ಜೊತೆ 70 ರನ್ ಸೇರಿಸಿದ ಶಾನ್ ವೊನ್ ಬರ್ಗ್(38 ರನ್)ದಿನದ ಮೂರನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಮಂಗಳವಾರ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಬಾರಿ ಅರ್ಧಶತಕವನ್ನು ಸಿಡಿಸಿದ್ದ ರುಯಾನ್ 64 ರನ್ ಗಳಿಸಿ ಔಟಾದರು.
ವಿಲ್ ಒ ರೌರ್ಕಿ ಸತತ ಎಸೆತಗಳಲ್ಲಿ ಕೊನೆಯ ಎರಡು ವಿಕೆಟ್ ಗಳನ್ನು ಕಬಳಿಸಿದ್ದು ತನ್ನ ಚೊಚ್ಚಲ ಪಂದ್ಯದಲ್ಲಿ 59 ರನ್ ಗೆ 4 ವಿಕೆಟ್ ಗಳನ್ನು ಉರುಳಿಸಿದರು.
2ನೇ ದಿನದಾಟದಲ್ಲಿ ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಝಿಲ್ಯಾಂಡ್ ಕಳಪೆ ಫಾರ್ಮ್ನಲ್ಲಿದ್ದ ಕಾನ್ವೆ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಕಾನ್ವೆ ಇನಿಂಗ್ಸ್ ನ ನಾಲ್ಕನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಕಾನ್ವೆ ಸುಮಾರು ಒಂದು ವರ್ಷದಿಂದ ಟೆಸ್ಟ್ ಕ್ರಿಕೆಟ್ ನಲ್ಲಿ 50 ರನ್ ಗಳಿಸಿಲ್ಲ.
ಲ್ಯಾಥಮ್ ಹಾಗೂ ವಿಲಿಯಮ್ಸನ್ ಎರಡನೇ ವಿಕೆಟ್ ಗೆ 74 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ಆಧರಿಸಿದರು.ಲ್ಯಾಥಮ್ 40 ರನ್ ಗಳಿಸಿ ಪೀಟ್ ಗೆ ವಿಕೆಟ್ ಒಪ್ಪಿಸಿದರು. ವಿಲಿಯಮ್ಸನ್ ಕೂಡ 43 ರನ್ ಗಳಿಸಿ ಪೀಟ್ ಗೆ ಬಲಿಯಾದರು.
ರಚಿನ್ ರವೀಂದ್ರ 29 ರನ್ ಗಳಿಸಿ ಶೆಪೊ ಮೊರೆಕಿಗೆ ಕ್ಲೀನ್ ಬೌಲ್ಡಾದರು. ವಿಲ್ಯಂಗ್ 36 ರನ್ ಗಳಿಸಿ ಔಟಾದರು.