ದ್ವಿತೀಯ ಟೆಸ್ಟ್: ದಕ್ಷಿಣ ಆಫ್ರಿಕಾ ಜಯಭೇರಿ, ಸರಣಿ ಕೈವಶ
ಕೇಶವ ಮಹಾರಾಜ್ಗೆ ಐದು ವಿಕೆಟ್
PC : PTI
ಜೋಹಾನ್ಸ್ಬರ್ಗ್ : ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ ಕಬಳಿಸಿದ ಐದು ವಿಕೆಟ್ ಗೊಂಚಲು ನೆರವಿನಿಂದ ಶ್ರೀಲಂಕಾ ಕ್ರಿಕೆಟ್ ತಂಡದ ವಿರುದ್ಧ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ದ್ವಿತೀಯ ಟೆಸ್ಟ್ ಪಂದ್ಯವನ್ನು 109 ರನ್ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ಮಹಾರಾಜ್ 76 ರನ್ಗೆ ಐದು ವಿಕೆಟ್ಗಳನ್ನು ಉರುಳಿಸುವ ಮೂಲಕ ಗೆಲ್ಲಲು 348 ರನ್ ಗುರಿ ಬೆನ್ನಟ್ಟುತ್ತಿದ್ದ ಶ್ರೀಲಂಕಾ ತಂಡವನ್ನು 2ನೇ ಇನಿಂಗ್ಸ್ನಲ್ಲಿ 238 ರನ್ಗೆ ಆಲೌಟ್ ಮಾಡಿದರು. ತಲಾ ಎರಡು ವಿಕೆಟ್ಗಳನ್ನು ಪಡೆದ ಪ್ಯಾಟರ್ಸನ್(2-33)ಹಾಗೂ ಕಾಗಿಸೊ ರಬಾಡ(2-63) ಕೇಶವ ಮಹಾರಾಜ್ಗೆ ಸಾಥ್ ನೀಡಿದರು.
ಲಂಕಾ ತಂಡವು ಕೊನೆಯ ದಿನದಾಟವಾದ ಸೋಮವಾರ ಕೇವಲ 33 ರನ್ಗೆ ಐದು ವಿಕೆಟ್ಗಳನ್ನು ಕಳೆದುಕೊಂಡಿತು.
ಈ ಗೆಲುವಿನ ನಂತರ ದಕ್ಷಿಣ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
5ನೇ ಹಾಗೂ ಅಂತಿಮ ದಿನದಾಟವಾದ ಸೋಮವಾರ 5 ವಿಕೆಟ್ಗಳ ನಷ್ಟಕ್ಕೆ 205 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೀಲಂಕಾ ತಂಡಕ್ಕೆ ಗೆಲ್ಲಲು ಇನ್ನೂ 143 ರನ್ ಅಗತ್ಯವಿತ್ತು. ಔಟಾಗದೆ 39 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಧನಂಜಯ ಡಿಸಿಲ್ವ ಹಾಗೂ ಕುಶಾಲ್ ಮೆಂಡಿಸ್ ಇಂದು ಮೊದಲ 10 ಓವರ್ಗಳಲ್ಲಿ ಔಟಾದ ನಂತರ ಲಂಕಾದ ಗೆಲುವಿನ ಕನಸು ನುಚ್ಚುನೂರಾಯಿತು.
ಮೆಂಡಿಸ್ ಅವರು ಕೇಶವ ಮಹಾರಾಜ್ ಬೌಲಿಂಗ್ನಲ್ಲಿ ಮರ್ಕ್ರಮ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 76 ಎಸೆತಗಳಲ್ಲಿ 46 ರನ್ ಗಳಿಸಿ ಔಟಾಗುವ ಮೊದಲು ಮೆಂಡಿಸ್ ಅವರು ಡಿಸಿಲ್ವರೊಂದಿಗೆ ಆರನೇ ವಿಕೆಟ್ಗೆ ಅಮೂಲ್ಯ 97 ರನ್ ಜೊತೆಯಾಟ ನಡೆಸಿದರು.
ಶ್ರೀಲಂಕಾದ ನಾಯಕ ಡಿಸಿಲ್ವ ಅವರು ಕಾಗಿಸೊ ರಬಾಡ ಬೌಲಿಂಗ್ನಲ್ಲಿ ಔಟಾಗುವ ಮೊದಲು ಅರ್ಧಶತಕ (50 ರನ್, 92 ಎಸೆತ) ಪೂರೈಸಿದರು. ಈ ಇಬ್ಬರು ಔಟಾದ ನಂತರ ಶ್ರೀಲಂಕಾದ ಕೆಳ ಸರದಿಯ ಆಟಗಾರರು ಸುಲಭವಾಗಿ ಶರಣಾದರು.
ಲಹಿರು ಕುಮಾರ ವಿಕೆಟನ್ನು ಪಡೆದ ವೇಗಿ ಮಾರ್ಕೊ ಜಾನ್ಸನ್(1-54) ಶ್ರೀಲಂಕಾದ ಇನಿಂಗ್ಸ್ಗೆ ತೆರೆ ಎಳೆದರು.
ಅನನುಭವಿ ಆಟಗಾರರನ್ನು ಹೊಂದಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಈ ಗೆಲುವು ಮಹತ್ವದ ಮೈಲಿಗಲ್ಲು ಎಂದು ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಬಣ್ಣಿಸಿದ್ದಾರೆ.
4 ಇನಿಂಗ್ಸ್ಗಳಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕಗಳ ಸಹಿತ ಒಟ್ಟು 327 ರನ್ ಗಳಿಸಿರುವ ಬವುಮಾ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಇನಿಂಗ್ಸ್ನಲ್ಲಿ ಐದು ವಿಕೆಟ್ ಗೊಂಚಲು ಸಹಿತ ಒಟ್ಟು 7 ವಿಕೆಟ್ಗಳನ್ನು ಪಡೆದಿರುವ ಡೇನ್ ಪ್ಯಾಟರ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ವೈಯಕ್ತಿಕ ಪ್ರದರ್ಶನಗಳು ಮೂಡಿಬಂದವು. ಮೂವರು ಬ್ಯಾಟರ್ಗಳು ಶತಕಗಳನ್ನು ಗಳಿಸಿದರೆ, ಮೂವರು ಬೌಲರ್ಗಳು ಐದು ವಿಕೆಟ್ ಗೊಂಚಲನ್ನು ಪಡೆದರು. ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್(5-76)ಕೊನೆಯ ದಿನವಾದ ಸೋಮವಾರ 5 ವಿಕೆಟ್ ಗೊಂಚಲು ಪಡೆದು ತಂಡದ ಗೆಲುವಿಗೆ ನೆರವಾದರು.
ಡರ್ಬನ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೇವಲ 42 ರನ್ಗೆ ಆಲೌಟಾಗಿದ್ದ ಶ್ರೀಲಂಕಾ ತಂಡವು 233 ರನ್ ಅಂತರದಿಂದ ಸೋತಿದೆ.