ಬಿಸಿಸಿಐನಿಂದ ಕಠಿಣ ನಿಯಮಗಳ ಪ್ರಸ್ತಾವ: ಗಂಭೀರ್ಗೆ ಹಿನ್ನಡೆ, ಕ್ರಿಕೆಟಿಗರ ಪತ್ನಿಯರಿಗೂ ಬಿಸಿ
ಗೌತಮ್ ಗಂಭೀರ್ | PC :PTI
ಹೊಸದಿಲ್ಲಿ: 2024-25ನೇ ಸಾಲಿನಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಕೆಲವು ಕಠಿಣ ನಿಯಮಗಳನ್ನು ತರಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ಈವರೆಗೆ ಆಟಗಾರರ ಕುಟುಂಬಗಳು, ವಿಶೇಷವಾಗಿ ಅವರ ಪತ್ನಿಯರು ದೀರ್ಘ ಪ್ರವಾಸಗಳ ಸಂದರ್ಭದಲ್ಲಿ ಅವರ ಜೊತೆಯಲ್ಲಿರಲು ಸ್ವತಂತ್ರರಾಗಿದ್ದರು. ಆದರೆ ಈಗ ತೀವ್ರ ಬದಲಾವಣೆಗಳನ್ನು ತರಲು ಬಿಸಿಸಿಐ ಸಜ್ಜಾಗಿದೆ. ವರದಿಗಳ ಪ್ರಕಾರ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಆಟಗಾರರು ದೀರ್ಘಾವಧಿಗೆ ತಮ್ಮ ಕುಟುಂಬಗಳೊಂದಿಗೆ ಉಳಿದುಕೊಂಡರೆ ಅದು ಮೈದಾನದಲ್ಲಿ ಅವರ ಪ್ರದರ್ಶನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಬಿಸಿಸಿಐ ಭಾವಿಸಿದೆ. ಆದ್ದರಿಂದ 2019ರ ಮುನ್ನ ಅಸ್ತಿತ್ವದಲ್ಲಿದ್ದ ನಿಯಮವನ್ನು ಮರುಜಾರಿಗೊಳಿಸುವ ಮೂಲಕ ಆಟಗಾರರೊಂದಿಗೆ ಕುಟುಂಬದ ಸಮಯವನ್ನು ಸೀಮಿತಗೊಳಿಸಲು ಅದು ಬಯಸಿದೆ.
ವರದಿಗಳ ಪ್ರಕಾರ 45 ದಿನಗಳ ಪ್ರವಾಸದ ಅವಧಿಯಲ್ಲಿ ಕುಟುಂಬಗಳು,ವಿಶೇಷವಾಗಿ ಪತ್ನಿಯರು ಆಟಗಾರರೊಂದಿಗೆ ಎರಡು ವಾರಗಳ ಕಾಲ ಮಾತ್ರ ಉಳಿಯಲು ಅವಕಾಶ ನೀಡಲಾಗುವುದು. ಇಷ್ಟೇ ಅಲ್ಲ,ಪ್ರತಿಯೊಬ್ಬ ಆಟಗಾರನೂ ತಂಡದ ಇತರ ಸದಸ್ಯರೊಂದಿಗೆ ಟೀಮ್ ಬಸ್ನಲ್ಲಿಯೇ ಪ್ರಯಾಣಿಸಬೇಕು. ಒಂಟಿಯಾಗಿ ಪ್ರಯಾಣಿಸುವುದನ್ನು ಬಿಸಿಸಿಐ ನಿರುತ್ತೇಜಿಸಲಿದೆ.
ಮುಖ್ಯ ಕೋಚ್ ಗೌತಮ ಗಂಭೀರ ಮತ್ತು ಅವರ ಮ್ಯಾನೇಜರ್ ಗೌರವ ಅರೋರಾ ಅವರಿಗೂ ಬಿಸಿಸಿಐ ಬಿಸಿ ಮುಟ್ಟಿಸಿದೆ. ತಂಡವು ಉಳಿದುಕೊಳ್ಳುವ ಹೋಟೆಲ್ನಲ್ಲಿ ತಂಗಲು ಅಥವಾ ಕ್ರೀಡಾಂಗಣದಲ್ಲಿ ವಿಐಪಿ ಬಾಕ್ಸ್ನಲ್ಲಿ ಕುಳಿತುಕೊಳ್ಳಲು ಅರೋರಾಗೆ ಅನುಮತಿಸಲಾಗುವುದಿಲ್ಲ. ಅವರು ತಂಡದ ಬಸ್ನಲ್ಲಿ ಗಂಭೀರ ಅವರ ಜೊತೆಗೆ ಅಥವಾ ಅಥವಾ ಅದರ ಹಿಂದಿನ ಬಸ್ನಲ್ಲಿ ಪ್ರಯಾಣಿಸುವಂತಿಲ್ಲ.
ವಿಮಾನ ಪ್ರಯಾಣದ ಸಂದರ್ಭದಲ್ಲಿ ಆಟಗಾರರ ಲಗೇಜ್ 150 ಕೆಜಿಗಿಂತ ಹೆಚ್ಚಿದ್ದರೆ ಅದಕ್ಕೆ ಹಣವನ್ನು ಪಾವತಿಸದಿರಲು ಬಿಸಿಸಿಐ ನಿರ್ಧರಿಸಿದೆ. ಈ ವೆಚ್ಚವನ್ನು ಸ್ವಯಂ ಆಟಗಾರರೇ ಭರಿಸುವಂತೆ ಸೂಚಿಸಲಾಗುವುದು.
ಭಾರತದ ಟೆಸ್ಟ್ ಮತ್ತು ಏಕದಿನ ಪಂದ್ಯಗಳ ಕ್ಯಾಪ್ಟನ್ ರೋಹಿತ್ ಶರ್ಮಾ,ಮುಖ್ಯ ಕೋಚ್ ಗಂಭೀರ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ ಅಗರ್ಕರ್ ಅವರು ಇತ್ತೀಚಿಗೆ ನೂತನವಾಗಿ ನೇಮಕಗೊಂಡಿರುವ ಕಾರ್ಯದರ್ಶಿ ಮತ್ತು ಖಜಾಂಚಿ ಸೇರಿದಂತೆ ಬಿಸಿಸಿಐನ ಹಿರಿಯ ಅಧಿಕಾರಿಗಳನ್ನು ಭೇಟಿಯಾದ ಸಂದರ್ಭ ಈ ವಿಷಯಗಳನ್ನು ಚರ್ಚಿಸಲಾಗಿದೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಸೇರಿದಂತೆ ಹಿರಿಯ ಕ್ರಿಕೆಟಿಗರ ಭವಿಷ್ಯ ಮತ್ತು ಗಂಭೀರ ಅವರ ಕೋಚಿಂಗ್ ಸಿಬ್ಬಂದಿಯ ಅಧಿಕಾರಾವಧಿಯ ಬಗ್ಗೆಯೂ ಚರ್ಚಿಸಲಾಗಿದೆ.
ತಂಡದಲ್ಲಿಯ ಸಹಾಯಕ ಸಿಬ್ಬಂದಿಗಳ ಕಾರ್ಯಾವಧಿಯನ್ನು ಮೂರು ವರ್ಷಗಳಿಗೆ ಸೀಮಿತಗೊಳಿಸಬೇಕು ಎಂದೂ ಸೂಚಿಸಲಾಗಿದೆ. ಕೆಲವು ಸಿಬ್ಬಂದಿಗಳು ಬಹಳ ಸಮಯದಿಂದ ತಂಡದಲ್ಲಿರುವುದರಿಂದ ಅವರ ಪ್ರದರ್ಶನ ನಿಂತ ನೀರಾಗಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಗಳು ಭಾವಿಸಿದ್ದಾರೆ.