ದಿಲ್ಲಿಯಲ್ಲಿ ತೀವ್ರ ವಾಯುಮಾಲಿನ್ಯ: ಅಭ್ಯಾಸದ ಅವಧಿಯನ್ನು ರದ್ದುಗೊಳಿಸಿದ ಬಾಂಗ್ಲಾದೇಶ ತಂಡ
ಹೊಸ ದಿಲ್ಲಿ: ಹೊಸದಿಲ್ಲಿಯಲ್ಲಿ ತೀವ್ರ ಸ್ವರೂಪದ ವಾಯು ಮಾಲಿನ್ಯವಿರುವುದರಿಂದ ಶ್ರೀಲಂಕಾ ತಂಡದೆದುರಿನ ವಿಶ್ವಕಪ್ ಪಂದ್ಯಕ್ಕೂ ಮುನ್ನ ನಡೆಯಬೇಕಿದ್ದ ಅಭ್ಯಾಸದ ಅವಧಿಯನ್ನು ರದ್ದುಗೊಳಿಸಬೇಕಾದ ಒತ್ತಡಕ್ಕೆ ಬಾಂಗ್ಲಾದೇಶ ತಂಡವು ಒಳಗಾಯಿತು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೋಲ್ಕತ್ತಾದಲ್ಲಿ ಪಾಕಿಸ್ತಾನ ತಂಡದೆದುರು ಪರಾಭವಗೊಳ್ಳುವ ಮೂಲಕ ಈಗಾಗಲೇ ವಿಶ್ವಕಪ್ ಕ್ರೀಡಾಕೂಟದಿಂದ ಹೊರ ಬಿದ್ದಿರುವ ಬಾಂಗ್ಲಾದೇಶವು ಶ್ರೀಲಂಕಾ ತಂಡದೆದುರಿನ ಪಂದ್ಯದಲ್ಲಿ ಪಾಲ್ಗೊಳ್ಳಲು ಬುಧವಾರ ಹೊಸದಿಲ್ಲಿಗೆ ಬಂದಿಳಿದಿದೆ. ಬಾಂಗ್ಲಾದೇಶ ತಂಡವು ಶುಕ್ರವಾರ ತನ್ನ ಮೊದಲ ಅಭ್ಯಾಸ ಅವಧಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ದಿಲ್ಲಿಯಲ್ಲಿನ ತೀವ್ರ ವಾಯು ಮಾಲಿನ್ಯ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡ ತಂಡದ ಆಡಳಿತ ಮಂಡಳಿಯು, ಅಭ್ಯಾಸದ ಅವಧಿಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದೆ.
“ಇಂದು ನಮಗೆ ಅಭ್ಯಾಸದ ಅವಧಿ ಇದ್ದರೂ, ನಿನ್ನೆಯಿಂದ ಇಲ್ಲಿನ ಪರಿಸ್ಥಿತಿಯು ಹದಗೆಟ್ಟಿರುವುದರಿಂದ ನಾವು ಯಾವುದೇ ಅವಕಾಶ ತೆಗೆದುಕೊಳ್ಳಲು ಬಯಸಲಿಲ್ಲ. ಯಾಕೆಂದರೆ, ನಮಗೆ ಅಭ್ಯಾಸಕ್ಕಾಗಿ ಇನ್ನೂ ಎರಡು ದಿನ ಲಭ್ಯವಿದೆ. ಹಲವಾರು ಆಟಗಾರರು ನಿನ್ನೆ ಹೊರಗೆ ಹೋಗಿದ್ದರು ಮತ್ತು ಅವರೀಗ ಒಂದು ಬಗೆಯ ಕೆಮ್ಮಿಗೆ ಒಳಗಾಗಿದ್ದಾರೆ. ಹೀಗಾಗಿ ಇದರಲ್ಲಿ ಅಪಾಯದ ಸಾಧ್ಯತೆ ಇದೆ. ಆದ್ದರಿಂದ, ನಮ್ಮ ಆಟಗಾರರು ಅಸ್ವಸ್ಥಗೊಳ್ಳದಿರಲಿ ಎಂದು ನಾವು ಅಭ್ಯಾಸವನ್ನು ರದ್ದುಗೊಳಿಸಿದೆವು” ಎಂದು ತಮ್ಮ ತಂಡ ಉಳಿದುಕೊಂಡಿರುವ ಹೋಟೆಲ್ ನಲ್ಲಿ ತಂಡದ ನಿರ್ದೇಶಕ ಖಾಲಿದ್ ಮಹ್ಮೂದ್ ತಿಳಿಸಿದ್ದಾರೆ.