ದೇಶೀಯ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡದಂತೆ ಶಾಕಿಬ್ ಅಲ್ ಹಸನ್ಗೆ ನಿಷೇಧ
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬಾಂಗ್ಲಾದೇಶಕ್ಕೆ ತೀವ್ರ ಹಿನ್ನಡೆ
ಶಾಕಿಬ್ ಅಲ್ ಹಸನ್ (Photo: PTI)
ಢಾಕಾ: ತಾನು ಮಾನ್ಯತೆ ನೀಡಿರುವ ಪಂದ್ಯಗಳಲ್ಲಿ ಬೌಲಿಂಗ್ ಮಾಡದಂತೆ ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಾಕಿಬ್ ಅಲ್ ಹಸನ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನಿಷೇಧ ಹೇರಿದೆ. ಕಾನೂನು ಬಾಹಿರ ಬೌಲಿಂಗ್ ಶೈಲಿಯನ್ನು ಅನುಸರಿಸಿದ್ದಕ್ಕಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಶಕೀಬ್ ಅಲ್ ಹಸನ್ರಿಗೆ ನಿಷೇಧ ಹೇರಿದ ಬೆನ್ನಿಗೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿ ಪ್ರಾರಂಭಗೊಳ್ಳಲು ಇನ್ನೆರಡು ಮೂರು ತಿಂಗಳು ಬಾಕಿಯಿದ್ದು, ಅದಕ್ಕಾಗಿ ಬಾಂಗ್ಲಾದೇಶ ತಂಡ ಸಿದ್ಧತೆ ನಡೆಸುತ್ತಿದ್ದ ಮಹತ್ವದ ಕಾಲಘಟ್ಟದಲ್ಲೇ ಈ ಕ್ರಮ ಪ್ರಕಟಗೊಂಡಿದ್ದು, ಬಾಂಗ್ಲಾದೇಶ ತಂಡ ತೀವ್ರ ಹಿನ್ನಡೆ ಅನುಭವಿಸಿದೆ.
ಶಾಕಿಬ್ ಅಲ್ ಹಸನ್ ಅವರಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡದಂತೆ ನಿಷೇಧ ಹೇರಲಾಗಿರುವುದನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ದೃಢಪಡಿಸಿದೆ. ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಆದ ಶಾಕಿಬ್ ಅಲ್ ಹಸನ್ ಶೀಘ್ರದಲ್ಲೇ ಬೌಲಿಂಗ್ ಮರುಮೌಲ್ಯಮಾಪನಕ್ಕೆ ಒಳಗಾಗಲಿದ್ದಾರೆ ಎಂದೂ ಅದು ಹೇಳಿದೆ.