ಸೆಲ್ಫಿ ತೆಗೆಯಲು ಬಂದ ಅಭಿಮಾನಿಗೆ ಹೊಡೆಯಲು ಮುಂದಾದ ಶಾಕಿಬ್ ಅಲ್ ಹಸನ್!
PC : X \ @UmpireFourth
ಢಾಕಾ : ಸೆಲ್ಫಿ ತೆಗೆಯಲು ಬಂದ ಅಭಿಮಾನಿಯೊಬ್ಬನಿಗೆ ಹೊಡೆಯಲು ಮುಂದಾಗುವ ಮೂಲಕ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್ರೌಂಡರ್ ಶಾಕಿಬ್ ಅಲ್ ಹಸನ್ ಸುದ್ದಿಯಲ್ಲಿದ್ದಾರೆ.
ಢಾಕಾ ಪ್ರೀಮಿಯರ್ ಲೀಗ್ನ ನೇಪಥ್ಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಪಂದ್ಯಾವಳಿಯಲ್ಲಿ ಶಾಕಿಬ್, ಶೇಖ್ ಜಮಾಲ್ ಧನ್ಮೊಂಡಿ ಕ್ಲಬ್ ಪರವಾಗಿ ಆಡುತ್ತಿದ್ದಾರೆ. ಪ್ರೈಮ್ ಬ್ಯಾಂಕ್ ಕ್ರಿಕೆಟ್ ಕ್ಲಬ್ ವಿರುದ್ಧದ ಪಂದ್ಯದ ಟಾಸ್ಗೆ ಮುನ್ನ, ಸೆಲ್ಫಿ ತೆಗೆಯಲು ವ್ಯಕ್ತಿಯೊಬ್ಬ ಅವರ ಸಮೀಪ ಬಂದರು. ಇದರಿಂದ ಕೋಪಗೊಂಡ ಶಾಕಿಬ್, ಮೊದಲು ಸೆಲ್ಫಿಗೆ ಪೋಸ್ ಕೊಡಲು ನಿರಾಕರಿಸಿದರು. ಅಭಿಮಾನಿಯು ಒತ್ತಾಯಿಸಿದಾಗ, ಅವರ ಕುತ್ತಿಗೆಗೆ ಕೈಹಾಕಿದ ಶಾಕಿಬ್ ಹೆಚ್ಚು ಕಡಿಮೆ ಹೊಡೆಯಲು ಮುಂದಾದರು.
ಅವರು ಅಭಿಮಾನಿಗಳೊಂದಿಗೆ ಕೆಟ್ಟದಾಗಿ ವರ್ತಿಸುವುದು ಮಾತ್ರವಲ್ಲ, ಮೈದಾನದಲ್ಲಿ ಅಂಪಯರ್ಗಳ ಜೊತೆಗೂ ವಾಗ್ವಾದ ನಡೆಸುತ್ತಾರೆ.
ಈ ನಡುವೆ, 2024 ಟಿ20 ವಿಶ್ವಕಪ್ ಗೆ ಬಾಂಗ್ಲಾದೇಶದ ಸಿದ್ಧತೆಯ ಬಗ್ಗೆ ಶಾಕಿಬ್ ಗೆ ತೃಪ್ತಿಯಿಲ್ಲ. ‘‘ಕಳೆದ ವಿಶ್ವಕಪ್ನಲ್ಲಿ ನಾವು ಸಾಧಾರಣ ನಿರ್ವಹಣೆ ನೀಡಿದ್ದೇವೆ. ನಾವು ಅತ್ಯುತ್ತಮ ನಿರ್ವಹಣೆಯನ್ನೇನೂ ನೀಡಿಲ್ಲವಾದರೂ, ನಾವು ಕೆಟ್ಟದಾಗಿ ಆಡಿದ್ದೇವೆ ಎಂದು ಯಾರೂ ಹೇಳಿಲ್ಲ. ಅದು ನಮ್ಮ ನಿರ್ವಹಣೆಯ ಮಾನದಂಡವಾದರೆ, ಈ ಬಾರಿ ನಾವು ಅದನ್ನು ದಾಟಲಿದ್ದೇವೆ. ಹಾಗೆ ಆಗಬೇಕಾದರೆ, ಮೊದಲ ಸುತ್ತಿನಲ್ಲಿ ನಾಉ ಮೂರು ಪಂದ್ಯಗಳನ್ನು ಗೆಲ್ಲಬೇಕಾಗಿದೆ’’ ಎಂದು ಢಾಕಾದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಕಿಬ್ ಹೇಳಿದರು.
ಶಾಕಿಬ್ ಅಲ್ ಹಸನ್ 2006ರಿಂದ ಈವರೆಗೆ 67 ಟೆಸ್ಟ್ ಪಂದ್ಯಗಳು, 247 ಏಕದಿನ ಪಂದ್ಯಗಳು ಮತ್ತು 117 ಟಿ20 ಪಂದ್ಯಗಳನ್ನು ಆಡಿದ್ದಾರೆ.