ಐಪಿಎಲ್ ನಲ್ಲಿ ಮಾರಾಟವಾಗದ ಬ್ಯಾಟರ್ ಪೃಥ್ವಿ ಶಾಗೆ ಶೇನ್ ವಾಟ್ಸನ್ ಬೆಂಬಲ
ಪೃಥ್ವಿ ಶಾ, ಶೇನ್ ವಾಟ್ಸನ್ | PC ; X
ಮುಂಬೈ : ದೈಹಿಕ ಕ್ಷಮತೆ ಕೊರತೆಯ ಕಾರಣಕ್ಕಾಗಿ ಮುಂಬೈ ರಣಜಿ ತಂಡದಿಂದ ಹೊರಬಿದ್ದ ಬಳಿಕ, ಪೃಥ್ವಿ ಶಾ ಅವರ ಸಮಸ್ಯೆಗಳು ಉಲ್ಬಣಿಸಿವೆ. 2025ರ ಐಪಿಎಲ್ ಹರಾಜಿನಲ್ಲಿ 25 ವರ್ಷದ ಪೃಥ್ವಿ ಶಾ ಮಾರಾಟವಾಗಿಲ್ಲ. ಯಾವುದೇ ತಂಡವೂ ಅವರ ಮೂಲ ಬೆಲೆ 75 ಲಕ್ಷ ರೂ.ಗೂ ಅವರ ಖರೀದಿಗೆ ಬಿಡ್ ಸಲ್ಲಿಸಿಲ್ಲ.
ಅವರನ್ನು ಸೈಯದ್ ಮುಶ್ತಾಕ್ ಅಲಿ ಪಂದ್ಯಾವಳಿಯಲ್ಲಿ ಆಡುವ ಮುಂಬೈ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆ ಪಂದ್ಯಾವಳಿಯ ನಾಲ್ಕು ಇನಿಂಗ್ಸ್ಗಳಲ್ಲಿ ಅವರು ಶೂನ್ಯ ಸಂಪಾದನೆ ಮಾಡಿದ್ದರು. ಉಳಿದಂತೆ, ಕೇರಳ ವಿರುದ್ಧ ಅವರು 23 ರನ್ ಗಳಿಸಿದ್ದರೆ, ನಾಗಾಲ್ಯಾಂಡ್ ವಿರುದ್ಧ 40 ರನ್ ಮಾಡಿದ್ದರು.
ಈ ನಿರ್ವಹಣೆಯ ಹಿನ್ನೆಲೆಯಲ್ಲಿ, ಅವರ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ.
ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಪೃಥ್ವಿ ಶಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ‘ಎಕ್ಸ್’ನಲ್ಲಿ ಕೆವಿನ್ ಪೀಟರ್ಸನ್ ಹಾಕಿದ ಸಂದೇಶವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
‘‘ಕೆಪಿ24 ಅವರ ಅಭಿಪ್ರಾಯವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಪೃಥ್ವಿ ಓರ್ವ ಬಾಲಪ್ರೌಢ ಪ್ರತಿಭೆ. ಸ್ಥಿತಿಗತಿಯನ್ನು ಬದಲಿಸಿ ಭಾರತೀಯ ಕ್ರಿಕೆಟ್ನ ದೊಡ್ಡ ಹೀರೋಗಳ ಪೈಕಿ ಒಬ್ಬನಾಗಲು ಅವರ ಪಾಲಿಗೆ ಇವೆಲ್ಲ ಆಗಬೇಕಾಗಿತ್ತು’’ ಎಂದು ಶೇನ್ ವಾಟ್ಸನ್ ಬರೆದಿದ್ದಾರೆ.
ಅದಕ್ಕೂ ಮೊದಲು, ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಶಾ ಅವರ ಪರಿಸ್ಥಿತಿಯ ವಿಶ್ಲೇಷಣೆ ನಡೆಸಿದ್ದರು. ಶಾ ಅವರಲ್ಲಿ ಪ್ರತಿಭೆ ಇದೆ ಎನ್ನುವುದನ್ನು ಒಪ್ಪಿಕೊಂಡಿರುವ ಅವರು, ಆದರೆ ಅವರು ದೈಹಿಕ ಕ್ಷಮತೆಗೆ ಆದ್ಯತೆ ನೀಡಬೇಕು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗುವುದನ್ನು ಕಡಿಮೆ ಮಾಡಬೇಕು ಎಂದು ಹೇಳಿದ್ದರು.