ಶಾಂಘೈ ಮಾಸ್ಟರ್ಸ್| 2ನೇ ಸುತ್ತಿಗೆ ರೋಹನ್ ಬೋಪಣ್ಣ
ರೋಹನ್ ಬೋಪಣ್ಣ | PC : PTI
ಶಾಂಘೈ : ಚೀನಾದ ಶಾಂಘೈಯಲ್ಲಿ ನಡೆಯುತ್ತಿರುವ ಎಟಿಪಿ ಶಾಂಘೈ ಮಾಸ್ಟರ್ಸ್ ಪಂದ್ಯಾವಳಿಯ ಪುರುಷರ ಡಬಲ್ಸ್ ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಕ್ರೊಯೇಶಿಯದ ಇವಾನ್ ಡೋಡಿಗ್ ಜೋಡಿ ಶುಕ್ರವಾರ ಎರಡನೇ ಸುತ್ತು ತಲುಪಿದೆ. ಭಾರತ-ಕ್ರೊಯೇಶಿಯ ಜೋಡಿಯು ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್ನ ಪಾಬ್ಲೊ ಕರೇನೊ ಬಸ್ಟ ಮತ್ತು ಪೆಡ್ರೊ ಮಾರ್ಟಿನೇಝ್ ಜೋಡಿಯನ್ನು 6-4, 6-3 ನೇರ ಸೆಟ್ಗಳಿಂದ ಸೋಲಿಸಿದೆ.
ಬೋಪಣ್ಣ ಮತ್ತು ಇವಾನ್ ಜೊತೆಯಾಗಿ ಆಡಿ ಗೆದ್ದಿರುವ ಮೊದಲ ಪಂದ್ಯ ಇದಾಗಿದೆ.
ಐದನೇ ಶ್ರೇಯಾಂಕದ ಭಾರತ-ಕ್ರೊಯೇಶಿಯ ಜೋಡಿಯು ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು ಮತ್ತು ಕೇವಲ 63 ನಿಮಿಷಗಳಲ್ಲಿ ಜಯಿಸಿತು. ಅವರು ಎದುರಾಳಿಗಳತ್ತ ಐದು ಏಸ್ಗಳನ್ನು ಸಿಡಿಸಿದರು. ಎದುರಾಳಿ ಜೋಡಿಗೆ ಒಂದೇ ಒಂದು ಏಸನ್ನು ಸಿಡಿಸಲು ಸಾಧ್ಯವಾಗಲಿಲ್ಲ. ರೋಹನ್-ಇವಾನ್ ಜೋಡಿಯು ತಾನೆದುರಿಸಿದ ಎಂಟು ಬ್ರೇಕ್ ಪಾಯಿಂಟ್ಗಳ ಪೈಕಿ ಮೂರನ್ನು ಅಂಕಗಳಾಗಿ ಪರಿವರ್ತಿಸಿತು. ಅವರು ತಮ್ಮ ಸರ್ವಿಸ್ ಗೇಮ್ಗಳಲ್ಲಿ ನಾಲ್ಕು ಬ್ರೇಕ್ ಚಾನ್ಸ್ ಗಳನ್ನು ಉಳಿಸಿದರು ಮತ್ತು ಪಂದ್ಯದಲ್ಲಿ ಒಮ್ಮೆ ಮಾತ್ರ ಸರ್ವ್ ಕಳೆದುಕೊಂಡರು.
ಸಿಂಗಲ್ಸ್ ನಲ್ಲಿ ಭಾರತದ ಸವಾಲು ಈಗಾಗಲೇ ಕೊನೆಗೊಂಡಿದೆ. ಸುಮಿತ್ ನಾಗಲ್ ಮತ್ತು ರಾಮ್ಕುಮಾರ್ ರಾಮನಾಥನ್ ಇಬ್ಬರೂ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದಾರೆ.
ರಾಮ್ಕುಮಾರ್ ಅರ್ಹತಾ ಸುತ್ತುಗಳಲ್ಲಿ ಆಡಿ ಪ್ರಧಾನ ಸುತ್ತಿಗೆ ತೇರ್ಗಡೆಗೊಂಡರೆ, ನಾಗಲ್ ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದಿದ್ದಾರೆ.