9ನೇ ಕ್ರಮಾಂಕದಲ್ಲಿ ಬಂದು ಶತಕ ಸಿಡಿಸಿದ ಶಾರ್ದುಲ್ ಠಾಕೂರ್
ರಣಜಿ ಟ್ರೋಫಿ ಸೆಮಿಫೈನಲ್: ತಮಿಳುನಾಡು ವಿರುದ್ಧ ಪ್ರಬಲ ಸ್ಥಿತಿಯಲ್ಲಿ ಮುಂಬೈ

ಶಾರ್ದುಲ್ ಠಾಕೂರ್ | screengrab : @CricCrazyJohns
ಮುಂಬೈ: ಒಂಭತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಆಲ್ರೌಂಡರ್ ಶಾರ್ದುಲ್ ಠಾಕೂರ್ ರ ಭವ್ಯ ಶತಕದ ನೆರವಿನಿಂದ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಮುಂಬೈ ತಂಡವು ರವಿವಾರ ಉತ್ತಮ ಸ್ಥಿತಿಗೆ ಏರಿದೆ.
ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ನಡೆದ ಪಂದ್ಯದ ಎರಡನೇ ದಿನವಾದ ರವಿವಾರ ಠಾಕೂರ್ 105 ಎಸೆತಗಳಲ್ಲಿ 109 ರನ್ ಗಳನ್ನು ಸಿಡಿಸಿ ತನ್ನ ತಂಡವನ್ನು ಅಪಾಯದಿಂದ ಪಾರು ಮಾಡಿದರು.
ಇದು ಅವರ ಮೊದಲ ಪ್ರಥಮ ದರ್ಜೆ ಶತಕವಾಗಿದೆ. ಅವರು 89 ಎಸೆತಗಳಲ್ಲೇ ತನ್ನ ಶತಕವನ್ನು ಪೂರೈಸಿದರು. ಮುಂಬೈ ತಂಡವು ತನ್ನ ಮೊದಲ ಇನಿಂಗ್ಸ್ ನಲ್ಲಿ 106 ರನ್ ಗಳನ್ನು ಗಳಿಸುವಷ್ಟರಲ್ಲಿ 7 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಠಾಕೂರ್ ಒಂಭತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದರು. ಅವರು ತಮಿಳುನಾಡು ಬೌಲರ್ ಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದರು.
ಅವರ 109 ರನ್ ಗಳಲ್ಲಿ 13 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್ ಗಳಿದ್ದವು. ತನ್ನ ಶತಕದ ಮೂಲಕ ಅವರು ತನ್ನ ತಂಡವನ್ನು ಏಕಾಂಗಿಯಾಗಿ ಅಪಾಯದಿಂದ ಪಾರು ಮಾಡಿದರು.
ಅವರು ಹಾರ್ದಿಕ್ ತಮೋರೆ ಮತ್ತು ತನುಷ್ ಕೋಟ್ಯಾನ್ ಜೊತೆಗೆ ಎರಡು ಭಾಗೀದಾರಿಕೆಗಳನ್ನು ನಿಭಾಯಿಸಿದರು. ಅಂತಿಮವಾಗಿ ಅವರು ಕುಲದೀಪ್ ಸೇನ್ ಎಸೆತದಲ್ಲಿ ವಿಕೆಟ್ ಹಿಂದುಗಡೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಇದಕ್ಕೂ ಮೊದಲು, ಮುಂಬೈ ತನ್ನ ಮೊದಲ ಇನಿಂಗ್ಸನ್ನು ಮುನ್ನಾ ದಿನದ ಮೊತ್ತ 2 ವಿಕೆಟ್ ಗಳ ನಷ್ಟಕ್ಕೆ 45 ಇದ್ದಲ್ಲಿಂದ ಮುಂದುವರಿಸಿತು. ಮೊತ್ತವನ್ನು 3 ವಿಕೆಟ್ ಗಳ ನಷ್ಟಕ್ಕೆ 91ಕ್ಕೆ ಒಯ್ಯುವಲ್ಲಿ ಮುಂಬೈ ಯಶಸ್ವಿಯಾಯಿತು.
ಆದರೆ, ತಮಿಳುನಾಡು ನಾಯಕ ಸಾಯಿ ಕಿಶೋರ್ ರ ಮಾರಕ ದಾಳಿಗೆ ಮುಂಬೈಯ ಮಧ್ಯಮ ಸರದಿ ಕುಸಿಂಯಿತು. ಸಾಯಿ ಕಿಶೋರ್ ಐದು ವಿಕೆಟ್ ಗಳ ಗೊಂಚಿಲು ಪಡೆದರು.
ಮುಂಬೈ ಇನಿಂಗ್ಸ್ ನಲ್ಲಿ 10ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದ ತನುಷ್ ಕೋಟ್ಯಾನ್ 74 ರನ್ ಗಳನ್ನು ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಅವರೊಂದಿಗೆ ತುಷಾರ್ ದೇಶಪಾಂಡೆ 17 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಎರಡನೇ ದಿನದಾಟದ ಮುಕ್ತಾಯಕ್ಕೆ ಮುಂಬೈ ತನ್ನ ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 353 ರನ್ ಗಳಿಸಿದೆ. ಅದು ತಮಿಳುನಾಡಿಗಿಂತ 207 ರನ್ ಗಳ ಮುನ್ನಡೆಯಲ್ಲಿದೆ.
HUNDRED FOR SHARDUL THAKUR IN RANJI SEMI WHEN TEAM WERE 106/7
— Johns. (@CricCrazyJohns) March 3, 2024
- The celebration was fire. pic.twitter.com/IubSed3uzF