ಪ್ರಸಕ್ತ ವಿಶ್ವಕಪ್ನಲ್ಲಿ ಅತಿದೊಡ್ಡ ಸಿಕ್ಸರ್ ಸಿಡಿಸಿದ ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್ Photo:twitter
ಮುಂಬೈ, ನ.2: ವಿಶ್ವಕಪ್ನಲ್ಲಿ ರನ್ ಕೊರತೆ ಎದುರಿಸುತ್ತಿದ್ದ ಭಾರತದ ಮಧ್ಯಮ ಸರದಿಯ ಬ್ಯಾಟರ್ ಶ್ರೇಯಸ್ ಅಯ್ಯರ್ ಶ್ರೀಲಂಕಾ ವಿರುದ್ಧ ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ತನ್ನ ಮೊದಲಿನ ಲಯ ಕಂಡುಕೊಂಡು ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ.
ಇಂದು ಸಂಪೂರ್ಣ ಭಿನ್ನ ಆಟಗಾರನಾಗಿ ಕಂಡುಬಂದಿರುವ ಅಯ್ಯರ್ ವಾಂಖೆಡೆ ಸ್ಟೇಡಿಯಮ್ನಲ್ಲಿ ಶ್ರೀಲಂಕಾ ಬೌಲರ್ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು.
ಇನಿಂಗ್ಸ್ನ 36ನೇ ಓವರ್ನಲ್ಲಿ ಅಯ್ಯರ್ ವಿಶ್ವಕಪ್ನಲ್ಲಿ ಅತಿ ದೊಡ್ಡ ಸಿಕ್ಸರ್ ಸಿಡಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಕಸುನ್ ರಜಿತಾ ಬೌಲಿಂಗ್ನಲ್ಲಿ 106 ಮೀಟರ್ ದೂರಕ್ಕೆ ಸಿಕ್ಸರ್ ಸಿಡಿಸಿದರು.
ಆಸ್ಟ್ರೇಲಿಯದ ಗ್ಲೆನ್ ಮ್ಯಾಕ್ಸ್ವೆಲ್ ಇತ್ತೀಚೆಗೆ ನ್ಯೂಝಿಲ್ಯಾಂಡ್ ವಿರುದ್ಧ 104 ಮೀಟರ್ ಎತ್ತರಕ್ಕೆ ಸಿಕ್ಸರ್ ಸಿಡಿಸಿದ್ದರು. ಇದೀಗ ಅವರು ವಿಶ್ವಕಪ್-2023ರಲ್ಲಿ ಅತಿದೊಡ್ಡ ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಶ್ರೇಯಸ್ ಅಯ್ಯರ್ ಅಫ್ಘಾನಿಸ್ತಾನದ ವಿರುದ್ಧ 101 ಮೀಟರ್ ಎತ್ತರಕ್ಕೆ ಸಿಕ್ಸರ್ ಹೊಡೆದಿದ್ದರು. ಪಾಕಿಸ್ತಾನದ ಫಖರ್ ಝಮಾನ್(99 ಮೀ.) ಹಾಗೂ ಆಸ್ಟ್ರೇಲಿಯದ ಡೇವಿಡ್ ವಾರ್ನರ್(98 ಮೀ.)ಪಟ್ಟಿಯಲ್ಲಿ 4ನೇ ಹಾಗೂ 5ನೇ ಸ್ಥಾನದಲ್ಲಿದ್ದಾರೆ.
28ರ ಹರೆಯದ ಅಯ್ಯರ್ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಟೂರ್ನಿಯಲ್ಲಿ 2ನೇ ಬಾರಿ 50 ರನ್ ದಾಖಲಿಸಿದರು. 4 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ ಏಕದಿನ ಕ್ರಿಕೆಟ್ನಲ್ಲಿ 16ನೇ ಅರ್ಧಶತಕ ಗಳಿಸಿದರು.