ಪ್ಯಾರಿಸ್ ಒಲಿಂಪಿಕ್ಸ್ | ಚಿನ್ನದ ಪದಕ ವಿಜೇತೆ ಹಿಜಾಬ್ ಧಾರಿಣಿ ಸಿಫಾನ್ ಹಸನ್
ಸಿಫಾನ್ ಹಸನ್ | Photo: X/ @stevecockburn
ಪ್ಯಾರಿಸ್ ಒಲಿಂಪಿಕ್ಸ್ ನ ಕೊನೆಯ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್ ಆದ ಮಹಿಳೆಯರ ಮ್ಯಾರಥಾನ್ ನಲ್ಲಿ ನೆದರ್ಲೆಂಡ್ಸ್ನ ಸಿಫಾನ್ ಹಸನ್ ದಾಖಲೆ ಬರೆದರು. ರವಿವಾರ ಮ್ಯಾರಥಾನ್ ನ ಅಂತಿಮ 250 ಮೀಟರ್ಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಒಲಿಂಪಿಕ್ಸ್ ದಾಖಲೆಯ ಎರಡು ಗಂಟೆ, 22 ನಿಮಿಷಗಳು ಮತ್ತು 55 ಸೆಕೆಂಡುಗಳಲ್ಲಿ ಡಚ್ ಓಟಗಾರ್ತಿ ಮಹಿಳೆಯರ ಮ್ಯಾರಥಾನ್ ಮುಗಿಸಿದರು.
ಒಲಿಂಪಿಕ್ಸ್ ಚಿನ್ನವನ್ನು ತಮ್ಮದಾಗಿಸಿಕೊಂಡರು. ಆದರೆ ಆ ಓಟ ಹಾಗು ಚಿನ್ನದ ಪಾದಕಕ್ಕಿಂತ ಹೆಚ್ಚು ಸುದ್ದಿಯಾದದ್ದು ಚಾಂಪಿಯನ್ ಸಿಫಾನ್ ಹಸನ್ ರ ನಡೆ. ಫ್ರಾನ್ಸ್ ತನ್ನ ಮಹಿಳಾ ಆಟಗಾರರು ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಒಲಿಂಪಿಕ್ಸ್ ಕ್ರೀಡಾಕೂಟದ ಕೊನೆಯ ಪೋಡಿಯಂ ಸಮಾರಂಭದಲ್ಲಿ ಮಧ್ಯದಲ್ಲಿ ಮಿಂಚಿದ್ದು ಚಿನ್ನ ವಿಜೇತೆ ಹಿಜಾಬ್ ಧಾರಿ ಸಿಫಾನ್ ಹಸನ್.
ಚಿನ್ನದ ಪದಕ ಸ್ವೀಕರಿಸುವಾಗ ಹಿಜಾಬ್ ಧರಿಸಿದ ಸಿಫಾನ್ ಹಸನ್ ವಿಶ್ವದಾದ್ಯಂತ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾದರು. ಆತಿಥೇಯ ರಾಷ್ಟ್ರವು ತನ್ನ ಮಹಿಳಾ ಅಥ್ಲೀಟ್ಗಳಿಗೆ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಒಲಿಂಪಿಕ್ ಕ್ರೀಡಾಕೂಟವನ್ನು ಸಿಫಾನ್ ಹಸನ್ ಅತ್ಯಂತ ಸೂಕ್ತ ರೀತಿಯಲ್ಲಿ ಕೊನೆಗೊಳಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಅಭಿನಂದನೆ ಹರಿದು ಬಂದಿದೆ.
ಫ್ರಾನ್ಸ್ ನ ಇಸ್ಲಾಮೋಫೋಬಿಯಾಗೆ ಸಿಫಾನ್ ಸರಿಯಾಗಿಯೇ ಉತ್ತರನೀಡಿದ್ದಾರೆ ಎಂದು ಹಲವರು ಬರೆದಿದ್ದಾರೆ. "2024 ರ ಒಲಿಂಪಿಕ್ಸ್ ಪಂದ್ಯಗಳಲ್ಲಿ ಮಹಿಳೆಯರು ಹಿಜಾಬ್ ಧರಿಸುವುದನ್ನು ಫ್ರಾನ್ಸ್ ನಿಷೇಧಿಸಿದ ನಂತರ, ಸಿಫಾನ್ ಹಸನ್ ಮಹಿಳಾ ಮ್ಯಾರಥಾನ್ ನ ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಹಿಜಾಬ್ ಧರಿಸಿದರು. ಅವರು ತುಂಬಾ ಶಕ್ತಿಶಾಲಿ, ಅದ್ಭುತ ಮಹಿಳೆ!” ಎಂದು X ಬಳಕೆದಾರರೊಬ್ಬರರು ಬರೆದರೆ "ಹಸನ್ ಗೆ ಅಭಿನಂದನೆಗಳು! ಆತಿಥೇಯ ರಾಷ್ಟ್ರ ತನ್ನ ಕ್ರೀಡಾಪಟುಗಳಿಗೆ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವಾಗ ಹಿಜಾಬ್ ಧರಿಸಿರುವ ಸಿಫಾನ್ ಚಿತ್ರ ತುಂಬಾ ಇಷ್ಟವಾಯಿತು" ಎಂದು ಮತ್ತೊಬ್ಬರು ಬರೆದಿದ್ದಾರೆ.
ತಮ್ಮ ಆಟಗಾರರಿಗೆ ಹಿಜಾಬ್ ನಿಷೇಧಿಸುವ ಫ್ರಾನ್ಸ್ ಸರಕಾರದ ನಿರ್ಧಾರ ತುಂಬಾ ಟೀಕೆಗೆ ಗುರಿಯಾಗಿತ್ತು. ಈ ನಿಷೇಧವು ಒಲಂಪಿಕ್ಸ್ನ ಸಮಾನತೆ, ಒಳಗೊಳ್ಳುವಿಕೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಗೌರವದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಇಸ್ಲಾಮಿಕ್ ಸಾಲಿಡಾರಿಟಿ ಸ್ಪೋರ್ಟ್ಸ್ ಫೆಡರೇಶನ್ ವಾದಿಸಿತ್ತು.
ಒಲಿಂಪಿಕ್ಸ್ ಪ್ರಾರಂಭವಾಗುವ ಒಂದು ವಾರದ ಮೊದಲು ಅಮ್ನೆಸ್ಟಿ ಇಂಟರ್ನ್ಯಾಶನಲ್ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿತ್ತು. ಲಿಂಗ ಸಮಾನತೆ ಮತ್ತು ಕ್ರೀಡೆಯಲ್ಲಿ ಒಳಗೊಳ್ಳುವಿಕೆಯನ್ನು ಸುಧಾರಿಸುವಲ್ಲಿ ಫ್ರಾನ್ಸಿನ ಘೋಷಿತ ಪ್ರಯತ್ನಗಳು ಒಂದು ಗುಂಪಿನ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಅಂದ್ರೆ ಧಾರ್ಮಿಕ ತಲೆ ಹೊದಿಕೆಗಳನ್ನು ಧರಿಸುವವರಿಗೆ ಅನ್ವಯಿಸುವುದಿಲ್ಲ ಎಂದು ಫ್ರೆಂಚ್ ಅಧಿಕಾರಿಗಳು ದೃಢವಾಗಿ ಮತ್ತು ನಾಚಿಕೆಯಿಲ್ಲದೆ ಸ್ಪಷ್ಟಪಡಿಸಿದ್ದಾರೆ ಎಂದು ಅಮ್ನೆಸ್ಟಿ ಇಂಟರ್ನ್ಯಾಶನಲ್ ಹೇಳಿತ್ತು.
ಒಮ್ಮೆ ಇಥಿಯೋಪಿಯನ್ ಆಶ್ರಯ ಪಡೆದಿದ್ದ ಸಿಫಾನ್ ಆರು ದಿನಗಳ ಅಂತರದಲ್ಲಿ ಮೂರು ದೂರದ ಓಟದ ಪದಕಗಳನ್ನು ಗೆಲ್ಲುವ ಮೂಲಕ ಅಮೋಘ ಒಲಿಂಪಿಕ್ಸ್ ಪ್ರಯಾಣವನ್ನು ಪೂರ್ಣಗೊಳಿಸಿದರು. ಈ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಮ್ಯಾರಥಾನ್ ನಲ್ಲಿ ಚಿನ್ನದ ಪದಕ ಗೆದ್ದ ಸಿಫಾನ್ 10,000 ಮೀಟರ್ ಮತ್ತು 5,000 ಮೀಟರ್ಗಳ ಓಟದಲ್ಲಿ ಕಂಚಿನ ಪದಕವನ್ನೂ ಗೆದ್ದುಕೊಂಡಿದ್ದಾರೆ.
ಒಟ್ಟು ಮೂರು ರೇಸ್ಗಳಲ್ಲಿ ಅವರು ಸುಮಾರು 62 ಕಿಮೀ ಅಂದ್ರೆ ಸುಮಾರು 38 ಮೈಲು ದೂರ ಓಡಿದ್ದಾರೆ. 31 ವರ್ಷ ವಯಸ್ಸಿನ ಸಿಫಾನ್ 1952 ರಲ್ಲಿ ಜೆಕ್ ಆಟಗಾರ್ತಿ ಎಮಿಲ್ ಜಟೋಪೆಕ್ ನಂತರ ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎಲ್ಲಾ ಮೂರು ದೂರದ ಸ್ಪರ್ಧೆಗಳಲ್ಲಿ ಪದಕ ಗೆದ್ದ ಮೊದಲ ಕ್ರೀಡಾಪಟುವಾದರು.
ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ 5,000 ಮೀಟರ್ ಮತ್ತು 10,000 ಮೀಟರ್ಗಳಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಸಿಫಾನ್ ಇತಿಹಾಸ ನಿರ್ಮಿಸಿದ್ದರು. ಜೊತೆಗೆ 1,500 ಮೀಟರ್ ನಲ್ಲಿ ಕಂಚಿನ ಪದಕವನ್ನು ಗೆದ್ದು ಕೊಂಡಿದ್ದರು.
ಆ ಮೂಲಕ ಒಂದೇ ಒಲಿಂಪಿಕ್ಸ್ನಲ್ಲಿ ಮಧ್ಯಮ ಮತ್ತು ದೂರದ ಎರಡೂ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು. ಒಲಿಂಪಿಕ್ಸ್ ನಲ್ಲಿ 5,000 ಮೀಟರ್, 10,000 ಮೀಟರ್ ಮಾತ್ತು ಮ್ಯಾರಥಾನ್ - ಈ ಮೂರರಲ್ಲೂ ಚಿನ್ನದ ಪದಕ ಗೆದ್ದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಯೂ ಸಿಫಾನ್ ಅವರದ್ದು.