ಬಾರ್ಡರ್-ಗಾವಸ್ಕರ್ ಟ್ರೋಫಿ: ಸೋಲಿನ ಭೀತಿಯಲ್ಲಿ ಆಸ್ಟ್ರೇಲಿಯ
Photo credit: PTI
ಪರ್ತ್: ಭಾರತ ತಂಡದ ಸಂಘಟಿತ ವೇಗದ ದಾಳಿಗೆ ತತ್ತರಿಸಿರುವ ಆಸ್ಟ್ರೇಲಿಯ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ ಟ್ರಾವಿಸ್ ಹೆಡ್ ಆಸರೆ ಒದಗಿಸಿದ್ದು, ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯ ತಂಡದ ಮೊತ್ತ 5 ವಿಕೆಟ್ ನಷ್ಟಕ್ಕೆ 104 ರನ್ ಆಗಿದೆ.
ನಿನ್ನೆ ಕೇವಲ 12 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯ ತಂಡ, ಇಂದು ಆಟ ಪ್ರಾರಂಭಿಸುತ್ತಿದ್ದಂತೆಯೆ ಉಸ್ಮಾನ್ ಖವಾಜಾರ ವಿಕೆಟ್ ಅನ್ನೂ ಕಳೆದುಕೊಂಡಿತು. ಆಗ ತಂಡದ ಮೊತ್ತ ಕೇವಲ 17 ರನ್ ಆಗಿತ್ತು.
ಈ ಹಂತದಲ್ಲಿ ಸ್ಟೀವ್ ಸ್ಮಿತ್ ರೊಂದಿಗೆ ಜೊತೆಯಾದ ಟ್ರಾವಿಸ್ ಹೆಡ್, ರಕ್ಷಣಾತ್ಮಕ ಹಾಗೂ ಆಕ್ರಮಣ ಮಿಶ್ರಿತ ಆಟದೊಂದಿಗೆ 63 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಸ್ಟೀವ್ ಸ್ಮಿತ್ ಜೊತೆ ಅವರು ಮಹತ್ವದ 62 ರನ್ ಜೊತೆಯಾಟವಾಡಿದರು. ಮತ್ತೊಂದೆಡೆ ತಾಳ್ಮೆಯ ಆಟವಾಡುತ್ತಿದ್ದ ಸ್ಟೀವ್ ಸ್ಮಿತ್ (17), ಸಿರಾಜ್ ಮುಹಮ್ಮದ್ ಎಸೆದ ಔಟ್ ಸ್ವಿಂಗ್ ಅನ್ನು ಅಂದಾಜಿಸುವಲ್ಲಿ ವಿಫಲಗೊಂಡು, ವಿಕೆಟ್ ಕೀಪರ್ ರಿಷಭ್ ಪಂತ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಆಗ ಆಸ್ಟ್ರೇಲಿಯ ತಂಡದ ಮೊತ್ತ 79 ರನ್ ಆಗಿತ್ತು.
ನಂತರ, ಟ್ರಾವಿಸ್ ಹೆಡ್ ಜೊತೆಗೂಡಿದ ಮಿಚೆಲ್ ಮಾರ್ಷ್ (5), ಮುರಿಯದ ಆರನೆ ವಿಕೆಟ್ ಜೊತೆಯಾಟದಲ್ಲಿ 25 ರನ್ ಕಲೆ ಹಾಕಿದ್ದಾರೆ.
ಭಾರತ ತಂಡದ ಪರ ಮಾರಕ ಬೌಲಿಂಗ್ ದಾಳಿ ಪ್ರದರ್ಶಿಸಿದ ನಾಯಕ ಜಸ್ ಪ್ರೀತ್ ಬೂಮ್ರಾ (26ಕ್ಕೆ 2 ವಿಕೆಟ್) ಹಾಗೂ ಮುಹಮ್ಮದ್ ಸಿರಾಜ್ (34ಕ್ಕೆ 3 ವಿಕೆಟ್), ಆಸ್ಟ್ರೇಲಿಯ ತಂಡ ಎರಡನೆ ಇನಿಂಗ್ಸ್ ನಲ್ಲೂ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಮತ್ತೊಬ್ಬ ವೇಗದ ಬೌಲರ್ ಹರ್ಷಿತ್ ರಾಣಾ ಕೂಡಾ ಪರಿಣಾಮಕಾರಿ ದಾಳಿ ನಡೆಸಿದರಾದರೂ, ಯಾವುದೇ ವಿಕೆಟ್ ಪಡೆಯುವಲ್ಲಿ ಇನ್ನೂ ಸಫಲವಾಗಿಲ್ಲ.