ನಿಧಾನಗತಿಯ ಬೌಲಿಂಗ್ | ರಾಹುಲ್, ಋತುರಾಜ್ ಗೆ ತಲಾ 12 ಲಕ್ಷ ರೂ. ದಂಡ
ಕೆ.ಎಲ್.ರಾಹುಲ್ | PC: X
ಲಕ್ನೊ: ಲಕ್ನೊ ಸೂಪರ್ ಜಯಂಟ್ಸ್ ನಾಯಕ ಕೆ.ಎಲ್.ರಾಹುಲ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ಗೆ ಶುಕ್ರವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವುದಕ್ಕೆ ತಲಾ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ತನ್ನ ತವರು ಮೈದಾನ ಭಾರತರತ್ನ ಎಬಿ ವಾಜಪೇಯಿ ಎಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಿದ ಲಕ್ನೊ ತಂಡ ಹಾಲಿ ಚಾಂಪಿಯನ್ ಸಿಎಸ್ ಕೆ ತಂಡವನ್ನು 8 ವಿಕೆಟ್ ಗಳ ಅಂತರದಿಂದ ಮಣಿಸಿತು.
ಸ್ಲೋ ಓವರ್ ರೇಟ್ ಗೆ ಸಂಬಂಧಿಸಿ ಐಪಿಎಲ್ ನೀತಿ ಸಂಹಿತೆಯಡಿ ಉಭಯ ತಂಡಗಳು ಇದೇ ಮೊದಲ ಬಾರಿ ತಪ್ಪೆಸಗಿದ ಕಾರಣಕ್ಕೆ ರಾಹುಲ್ ಹಾಗೂ ಋತುರಾಜ್ ಗೆ ತಲಾ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಮೊದಲು ಬ್ಯಾಟಿಂಗ್ ನ ಇಳಿಸಲ್ಪಟ್ಟ ಸಿಎಸ್ ಕೆ ತಂಡ ರವೀಂದ್ರ ಜಡೇಜ ಅರ್ಧಶತಕ(57 ರನ್), ಮೊಯಿನ್ ಅಲಿ(30 ರನ್) ಹಾಗೂ ಧೋನಿ(28 ರನ್)ಉಪಯುಕ್ತ ಕೊಡುಗೆಯ ನೆರವಿನಿಂದ 6 ವಿಕೆಟ್ ಗಳ ನಷ್ಟಕ್ಕೆ 176 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ರಾಹುಲ್(82 ರನ್) ಹಾಗೂ ಕ್ವಿಂಟನ್ ಡಿಕಾಕ್(54)ಮೊದಲ ವಿಕೆಟ್ಗೆ 134 ರನ್ ಜೊತೆಯಾಟ ನಡೆಸಿ ಲಕ್ನೊ ತಂಡ 19 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಲು ನೆರವಾದರು.