ನಿಧಾನಗತಿಯ ಬೌಲಿಂಗ್: ಹಾರ್ದಿಕ್ ಪಾಂಡ್ಯಗೆ ಒಂದು ಪಂದ್ಯದಿಂದ ನಿಷೇಧ
ಹಾರ್ದಿಕ್ ಪಾಂಡ್ಯ | PC :PTI
ಮುಂಬೈ: ಮುಂಬೈನ ವಾಂಖೆಡೆ ಮೈದಾನದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ವಿರುದ್ಧ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಓವರ್ರೇಟ್ಗೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೇಲೆ ಒಂದು ಪಂದ್ಯದಿಂದ ನಿಷೇಧ ಹಾಗೂ 30 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರಿಂದಾಗಿ 2025ನೇ ಸಾಲಿನ ಐಪಿಎಲ್ನಲ್ಲಿ ಮೊದಲ ಪಂದ್ಯದಲ್ಲಿ ಆಡುವ ಅವಕಾಶದಿಂದ ಹಾರ್ದಿಕ್ ವಂಚಿತರಾಗಲಿದ್ದಾರೆ.
ನಿಧಾನಗತಿಯ ಓವರ್ರೇಟ್ಗೆ ಸಂಬಂಧಿಸಿ ಐಪಿಎಲ್ನ ನೀತಿ ಸಂಹಿತೆ ಅಡಿ ಮುಂಬೈ ತಂಡ ಮೂರನೇ ಬಾರಿ ಈ ತಪ್ಪು ಎಸಗಿದೆ. ಪಾಂಡ್ಯಗೆ 30 ಲಕ್ಷ ರೂ. ದಂಡ ವಿಧಿಸಲಾಗಿದೆ ಹಾಗೂ ತಂಡದ ಮುಂದಿನ ಪಂದ್ಯದಿಂದ ನಿಷೇಧಿಸಲಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ಸಹಿತ್ ಆಡುವ 11ರ ಬಳಗದ ಉಳಿದ ಸದಸ್ಯರುಗಳಿಗೆ ತಲಾ 12 ಲಕ್ಷ ರೂ. ಅಥವಾ ಪಂದ್ಯಶುಲ್ಕದಲ್ಲಿ ಶೇ.50ರಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ತೀರಾ ಕಳಪೆ ಪ್ರದರ್ಶನ ನೀಡಿದ್ದಲ್ಲದೆ 14 ಪಂದ್ಯಗಳಲ್ಲಿ ಕೇವಲ 8 ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಮೂರು ವರ್ಷಗಳಲ್ಲಿ 2ನೇ ಬಾರಿ ಕೊನೆಯ ಸ್ಥಾನ ಪಡೆದಿದೆ.
ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲೂ ಮುಂಬೈ ಸೋಲು ಕಂಡಿದೆ. ಈಗ ಗಾಯದ ಮೇಲೆ ಬರೆ ಎಳೆದಂತೆ ನಾಯಕ ಹಾರ್ದಿಕ್ ಪಾಂಡ್ಯ ಭಾರೀ ಬೆಲೆ ತೆತ್ತಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿರುವ ಮುಂಬೈ ತಂಡ ಲೀಗ್ ಹಂತದ ತನ್ನೆಲ್ಲಾ 14 ಪಂದ್ಯಗಳನ್ನು ಪೂರ್ಣಗೊಳಿಸಿದೆ. ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಮೂರನೇ ಬಾರಿ ನಿಗದಿತ ಸಮಯದಲ್ಲಿ ಓವರ್ಗಳನ್ನು ಪೂರ್ಣಗೊಳಿಸಲು ವಿಫಲರಾದ ಕಾರಣಕ್ಕೆ ಹಾರ್ದಿಕ್ ಮೇಲೆ ಒಂದು ಪಂದ್ಯದಿಂದ ನಿಷೇಧ ಹೇರಲಾಗಿದೆ.