ಕನ್ನಡತಿ ಶ್ರೇಯಾಂಕಾ ಪಾಟೀಲ್ಗೆ ಗಾಯ; ಆರ್ಸಿಬಿ ತಂಡ ಸೇರಿದ ಸ್ನೇಹ್ ರಾಣಾ

ಶ್ರೇಯಾಂಕಾ ಪಾಟೀಲ್ | PTI
ಬೆಂಗಳೂರು: ಮಹಿಳೆಯರ ಪ್ರೀಮಿಯರ್ ಲೀಗ್-2025ರ ಇನ್ನುಳಿದ ಪಂದ್ಯಗಳಲ್ಲಿ ಗಾಯಾಳು ಶ್ರೇಯಾಂಕಾ ಪಾಟೀಲ್ ಬದಲಿಗೆ ಸ್ನೇಹ್ ರಾಣಾರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ಶನಿವಾರ ಪ್ರಕಟಿಸಿದೆ.
ಆರ್ಸಿಬಿ ಪರ 15 ಪಂದ್ಯಗಳಲ್ಲಿ 19 ವಿಕೆಟ್ಗಳನ್ನು ಕಬಳಿಸಿರುವ ಶ್ರೇಯಾಂಕಾ ಗಾಯದ ಸಮಸ್ಯೆಯ ಕಾರಣ ಮೂರನೇ ಆವೃತ್ತಿಯ ಟೂರ್ನಿಯಿಂದ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯ ಕಾರಣಕ್ಕೆ ಈ ಹಿಂದೆ ಸ್ವದೇಶದಲ್ಲಿ ನಡೆದಿದ್ದ ವೆಸ್ಟ್ಇಂಡೀಸ್ ಹಾಗೂ ಐರ್ಲ್ಯಾಂಡ್ ವಿರುದ್ಧದ ಪಂದ್ಯದಿಂದ ಶ್ರೇಯಾಂಕಾ ವಂಚಿತರಾಗಿದ್ದರು.
ಈ ಹಿಂದೆ ಗುಜರಾತ್ ಜೈಂಟ್ಸ್ ತಂಡದಲ್ಲಿ ಆಡಿದ್ದ 30ರ ಹರೆಯದ ಸ್ಪಿನ್ ಆಲ್ರೌಂಡರ್ ಸ್ನೇಹ್ ರಾಣಾ 30 ಲಕ್ಷ ರೂ.ಗೆ ಆರ್ಸಿಬಿ ತಂಡದೊಂದಿಗೆ ಸಹಿ ಹಾಕಿದ್ದಾರೆ. ರಾಣಾ ತಂಡಕ್ಕೆ ತನ್ನ ಉತ್ತಮ ಅನುಭವವನ್ನು ಧಾರೆ ಎರೆಯುವ ನಿರೀಕ್ಷೆ ಇದೆ.
ಹಾಲಿ ಚಾಂಪಿಯನ್ ಆರ್ಸಿಬಿ ಶುಕ್ರವಾರ ವಡೋದರದಲ್ಲಿ ಗುಜರಾತ್ ಜಯಂಟ್ಸ್ ತಂಡವನ್ನು ಆರು ವಿಕೆಟ್ಗಳ ಅಂತರದಿಂದ ಮಣಿಸುವ ಮೂಲಕ ಡಬ್ಲ್ಯುಪಿಎಲ್ನಲ್ಲಿ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿದೆ.