ಮುಂಬರುವ ದೇಶೀಯ ಕ್ರಿಕೆಟ್ ಗಿಂತ ಮೊದಲು ಬಂಗಾಳ ತಂಡಕ್ಕೆ ವೃದ್ದಿಮಾನ್ ಸಹಾ ವಾಪಸ್?
Photo Credit: MURALI KUMAR K/ The Hindu
ಕೋಲ್ಕತಾ: ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಹಾಗೂ ಬಂಗಾಳದ ವಿಕೆಟ್ಕೀಪರ್-ಬ್ಯಾಟರ್ ವೃದ್ದಿಮಾನ್ ಸಹಾ ಭೇಟಿಯ ಚಿತ್ರ ವೈರಲ್ ಆಗಿದ್ದು ಸಹಾ ಮುಂಬರುವ ದೇಶೀಯ ಕ್ರಿಕೆಟ್ ಆರಂಭಕ್ಕಿಂತ ಮೊದಲು ತವರು ರಾಜ್ಯ ತಂಡಕ್ಕೆ ವಾಪಸಾಗಲಿದ್ದಾರೆ ಎನ್ನಲಾಗಿದೆ.
ಸಹಾ ಬಂಗಾಳ ತಂಡಕ್ಕೆ ವಾಪಸಾಗುವ ಸಾಧ್ಯತೆಯಿದ್ದು, ನಮ್ಮ ಸಂಸ್ಥೆಯಿಂದ ಇನ್ನಷ್ಟೇ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್ಒಸಿ)ಪಡೆಯಬೇಕಾಗಿದೆ ಎಂದು ತ್ರಿಪುರಾ ಕ್ರಿಕೆಟ್ ಅಸೋಸಿಯೇಶನ್ ಸ್ಪೋಟ್ ಸ್ಟಾರ್ಗೆ ಖಚಿತಪಡಿಸಿದೆ.
ನಿವೃತ್ತಿಯಾಗುವ ಮೊದಲು ಬಂಗಾಳದ ಪರ ಕನಿಷ್ಠ ಒಂದು ಪಂದ್ಯವನ್ನು ಆಡುವಂತೆ ಗಂಗುಲಿ ಅವರು ಸಹಾಗೆ ತಿಳಿಸಿದ್ದಾರೆ. ತನ್ನ ನಿರ್ಧಾರದ ಕುರಿತು ಅವರು ಇನ್ನಷ್ಟೇ ಮನವರಿಕೆ ಮಾಡಬೇಕಾಗಿದೆ ಎಂದು ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ನಿರ್ದಿಷ್ಟ ಬಂಗಾಳ ಕ್ರಿಕೆಟ್ ಸಂಸ್ಥೆಯ(ಸಿಎಬಿ) ಅಧಿಕಾರಿಗಳೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಸಹಾ 2022ರಲ್ಲಿ ತ್ರಿಪುರಾ ರಾಜ್ಯ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಒಂದು ದಶಕಕ್ಕೂ ಅಧಿಕ ಸಮಯ ಬಂಗಾಳದ ಪರ ಆಡಿದ್ದ ಸಹಾ ಅವರ ಮನವೊಲಿಸಲು ಸಿಎಬಿ ಮುಖ್ಯಸ್ಥ ಅವಿಷೇಕ್ ದಾಲ್ಮಿಯಾ ಪ್ರಯತ್ನಿಸಿದ್ದರು. ಆದರೆ, ಬಂಗಾಳದ ಪರ ಇನ್ನು ಮುಂದೆ ಆಡುವುದಿಲ್ಲ ಎಂದು ಸಹಾ ಹೇಳಿದ್ದರು.
ಸಹಾ ಅವರು ಸಿಎಬಿಯ ಕೆಲವು ಹಿರಿಯ ಅಧಿಕಾರಿಗಳ ಹೇಳಿಕೆಗಳಿಂದ ಬೇಸರಗೊಂಡಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ರಣಜಿ ಟ್ರೋಫಿಯ ಗ್ರೂಪ್ ಹಂತದಿಂದ ಹೊರಗುಳಿದಿದ್ದ ಸಹಾ ಅವರ ಬದ್ಧತೆಯ ಬಗ್ಗೆ ಕೆಲವು ಸಿಎಬಿ ಅಧಿಕಾರಿಗಳು ಪ್ರಶ್ನಿಸಿದ್ದರು. ಕೋಚ್ ಅರುಣ್ ಲಾಲ್ ವಿಕೆಟ್ಕೀಪರ್ ಸಹಾ ಜೊತೆ ಮಾತನಾಡಿದ್ದರೂ ಬಂಗಾಳ ತಂಡದ ವಾಟ್ಸ್ಆ್ಯಪ್ ಗ್ರೂಪ್ನಿಂದ ಸಹಾ ನಿರ್ಗಮಿಸಿದ್ದರು.
ಆಟಗಾರ ಹಾಗೂ ಮಾರ್ಗದರ್ಶಕನಾಗಿ ತ್ರಿಪುರಾ ತಂಡದಲ್ಲಿ ಸಹಾ ಆಡಿದ್ದರು. ಕಳೆದ ಋತುವಿನಲ್ಲಿ ತ್ರಿಪುರಾ ದೇಶೀಯ ಟೂರ್ನಿಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದರು.