ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯ | ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿ ಭಾರತದ ಯುವ ಆಟಗಾರರು
PC : PTI
ಡರ್ಬನ್ : ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಯು ಡರ್ಬನ್ನಲ್ಲಿ ಶುಕ್ರವಾರ ಮೊದಲ ಪಂದ್ಯದೊಂದಿಗೆ ಆರಂಭವಾಗಲಿದೆ. ಭಾರತ ತಂಡವು ಪರಿವರ್ತನೆಯ ಘಟ್ಟ ಪ್ರವೇಶಿಸುತ್ತಿರುವಾಗ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಸಹಿತ ಹಲವು ಎರಡನೇ ಸಾಲಿನ ಆಟಗಾರರು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಇತ್ತೀಚೆಗೆ ಸ್ವದೇಶದಲ್ಲಿ ನಡೆದಿರುವ ಬಾಂಗ್ಲಾದೇಶ ವಿರುದ್ಧದ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಕೇರಳದ ಬ್ಯಾಟರ್ ಸ್ಯಾಮ್ಸನ್ ನಿರಂತರವಾಗಿ ಇನಿಂಗ್ಸ್ ಆರಂಭಿಸುವ ಅವಕಾಶ ನೀಡಲಾಗಿತ್ತು. ಇದರ ಸಂಪೂರ್ಣ ಲಾಭ ಪಡೆದಿದ್ದ ಸ್ಯಾಮ್ಸನ್ 47 ಎಸೆತಗಳಲ್ಲಿ 111 ರನ್ ಗಳಿಸಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧ ಕೆಲವು ಯಶಸ್ವಿ ಪ್ರದರ್ಶನ ನೀಡಿರುವ ಸ್ಯಾಮ್ಸನ್ ಅವರು ರೋಹಿತ್ ಶರ್ಮಾರ ನಿವೃತ್ತಿಯ ಹಿನ್ನೆಲೆಯಲ್ಲಿ ಟಿ20 ಕ್ರಿಕೆಟಿನ ಆರಂಭಿಕ ಸ್ಥಾನದಲ್ಲಿ ಸ್ಥಿರ ಪ್ರದರ್ಶನ ನೀಡಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವ ಭರವಸೆಯಲ್ಲಿದ್ದಾರೆ.
ಅಭಿಷೇಕ್ ಶರ್ಮಾ ಪಾಲಿಗೂ ಈ ಸರಣಿಯು ಪ್ರಮುಖವಾಗಿದೆ. ಜುಲೈನಲ್ಲಿ ಹರಾರೆಯಲ್ಲಿ ನಡೆದಿದ್ದ ಝಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಎಡಗೈ ಬ್ಯಾಟರ್ ಅಭಿಷೇಕ್ ತಾನಾಡಿದ 2ನೇ ಟಿ20 ಪಂದ್ಯದಲ್ಲಿ 36 ಎಸೆತಗಳಲ್ಲಿ ಶತಕ ಗಳಿಸಿದ್ದರೂ ತನ್ನ ಇತರ ಆರು ಅಂತರರಾಷ್ಟ್ರೀಯ ಇನಿಂಗ್ಸ್ಗಳಲ್ಲಿ 0,10,14,16,15 ಹಾಗೂ 4 ರನ್ ಗಳಿಸಿದ್ದರು.
ಕಳೆದ ತಿಂಗಳು ನಡೆದ ಎಮರ್ಜಿಂಗ್ ಏಶ್ಯ ಕಪ್ನಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿರುವ ಅಭಿಷೇಕ್ ಅವರು ಸ್ಯಾಮ್ಸನ್ರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿಷೇಕ್ ಅವರು ತನ್ನ ಎಡಗೈ ಸ್ಪಿನ್ ಬೌಲಿಂಗ್ ನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬಯಸಿದ್ದಾರೆ.
2023ರ ಆಗಸ್ಟ್ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಪಂದ್ಯದಲ್ಲಿ ತನ್ನ ಟಿ20 ವೃತ್ತಿಜೀವನದಲ್ಲಿ ಭರ್ಜರಿಯಾಗಿ ಆರಂಭಿಸಿದ್ದ ಎಡಗೈ ಬ್ಯಾಟರ್ ತಿಲಕ್ ವರ್ಮಾ ಆನಂತರ ಗಮನಾರ್ಹ ಪ್ರದರ್ಶನ ನೀಡಿಲ್ಲ.
ಜನವರಿ ಆರಂಭದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಆಡಿದ್ದರೂ ಆ ನಂತರ ಭಾರತದ ಪರ ಆಡುವ ಅವಕಾಶ ಪಡೆದಿಲ್ಲ. ಟಿ20 ಕ್ರಿಕೆಟ್ನಲ್ಲಿ 12 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ತಿಲಕ್ ಕೇವಲ ಒಂದು ಬಾರಿ ಅರ್ಧಶತಕ ಗಳಿಸಿದ್ದಾರೆ.
ಹೈದರಾಬಾದ್ ಆಟಗಾರ ತಿಲಕ್ ತನ್ನ ಆಫ್ ಸ್ಪಿನ್ ಬೌಲಿಂಗ್ನ ಮೂಲಕ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಐದು ವಿಕೆಟ್ಗಳನ್ನು ಪಡೆದು ಗಮನೀಯ ಪ್ರದರ್ಶನ ತೋರಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ ಹಾಗೂ ರ್ಯಾಂಕಿಂಗ್ ನಲ್ಲಿ ಕೆಲ ಸ್ಥಾನ ಕಳೆದುಕೊಂಡಿರುವ ವಿಕೆಟ್ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ದೊಡ್ಡ ಅವಕಾಶ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೂವರು ವೇಗಿಗಳಾದ ಯಶ್ ದಯಾಳ್, ಅವೇಶ್ ಖಾನ್ ಹಾಗೂ ವಿ.ವಿಜಯಕುಮಾರ್ ಹೇಗೆ ಪ್ರದರ್ಶನ ನೀಡುತ್ತಾರೆಂಬ ಬಗ್ಗೆ ಆಯ್ಕೆಗಾರರು ದೃಷ್ಟಿಹರಿಸಲಿದ್ದಾರೆ. ಅನನುಭವಿ ವೇಗದ ಬೌಲಿಂಗ್ ದಾಳಿಗೆ ಅರ್ಷದೀಪ್ ಸಿಂಗ್ ನೇತೃತ್ವವಹಿಸಿದ್ದಾರೆ. ಯಶ್ ದಯಾಳ್ ಹಾಗೂ ಕರ್ನಾಟಕದ ವಿಜಯಕುಮಾರ್ ಇನ್ನಷ್ಟೇ ಅಂತರರಾಷ್ಟ್ರೀಯ ಕ್ರಿಕೆಟಿಗೆ ಕಾಲಿಡಬೇಕಾಗಿದೆ.
ವಿಜಯಕುಮಾರ್ ಹಾಗೂ ದಯಾಳ್ ದೇಶೀಯ ಕ್ರಿಕೆಟ್ ಯಶಸ್ಸನ್ನು ಪುನರಾವರ್ತಿಸಲು ಯತ್ನಿಸಲಿದ್ದಾರೆ. ಐಪಿಎಲ್ನಿಂದ ಅಂತರರಾಷ್ಟ್ರೀಯ ಕ್ರಿಕೆಟ್ ತನಕ ಅರ್ಷದೀಪ್ ಹಾಗೂ ಅವೇಶ್ ಖಾನ್ ಸದ್ಯ ಉನ್ನತ ಮಟ್ಟದಲ್ಲಿದ್ದಾರೆ.
2024ರ ಐಪಿಎಲ್ ಋತುವಿನಲ್ಲಿ ಯಶಸ್ಸು ಸಾಧಿಸಿದ ನಂತರ ರಮಣ್ದೀಪ್ ಸಿಂಗ್ರೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ ಸಹಿ ಹಾಕಿದೆ. ರಮಣ್ದೀಪ್ ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ.
ಕೆಳ ಸರದಿಯ ನಿರ್ಭಿತಿಯ ಬ್ಯಾಟರ್, ಉಪಯುಕ್ತ ಮಧ್ಯಮ ವೇಗದ ಬೌಲರ್ ಹಾಗೂ ಸಮರ್ಥ ಔಟ್ಫೀಲ್ಡ್ ಫೀಲ್ಡರ್ ಆಗಿರುವ ರಮಣ್ದೀಪ್ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ನಾಯಕ ಸೂರ್ಯಕುಮಾರ್ ಯಾದವ್, ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಶ್ರೇಷ್ಠ ಪ್ರದರ್ಶನದ ಗುರಿ ಇಟ್ಟುಕೊಂಡಿದ್ದು, ನ್ಯೂಝಿಲ್ಯಾಂಡ್ ವಿರುದ್ಧ ಇತ್ತೀಚೆಗೆ ಸ್ವದೇಶದಲ್ಲಿ ಟೆಸ್ಟ್ ಸರಣಿಯಲ್ಲಿ ಆಗಿರುವ ನೋವನ್ನು ಮರೆಯಲು ಬಯಸಿದೆ. ಅಕ್ಷರ್ ಪಟೇಲ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೆಸ್ಟ್ ತಂಡದ ಏಕೈಕ ಆಟಗಾರನಾಗಿದ್ದಾರೆ.
ನವೆಂಬರ್ 24 ಹಾಗೂ 25ರಂದು ಸೌದಿ ಅರೇಬಿಯದಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿಗಿಂತ ಮೊದಲು ನಾಲ್ವರು ಆಟಗಾರರಾದ ಅರ್ಷದೀಪ್, ಅವೇಶ್, ಜಿತೇಶ್ ಹಾಗೂ ವಿಜಯಕುಮಾರ್ ದಕ್ಷಿಣ ಆಫ್ರಿಕಾದಲ್ಲಿ ಪ್ರಬಲ ಪ್ರದರ್ಶನ ನೀಡಿ ಫ್ರಾಂಚೈಸಿಗಳ ಗಮನ ಸೆಳೆಯಲು ಸಜ್ಜಾಗಿದ್ದಾರೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಜೂನ್ನಲ್ಲಿ ಟಿ20 ವಿಶ್ವಕಪ್ ಫೈನಲ್ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಆಗ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಸೋತು ಚೊಚ್ಚಲ ಪ್ರಶಸ್ತಿ ಗೆಲ್ಲುವುದರಿಂದ ವಂಚಿತವಾಗಿತ್ತು. ಪ್ರಸಕ್ತ ಸರಣಿಯಲ್ಲಿ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳುವತ್ತ ಚಿತ್ತ ಹರಿಸಿದೆ.
ತಂಡಗಳು
ಭಾರತ : ಸೂರ್ಯಕುಮಾರ್ ಯಾದವ್(ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಮಣ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಿಜಯಕುಮಾರ್, ಅವೇಶ್ ಖಾನ್, ಯಶ್ ದಯಾಳ್.
ದಕ್ಷಿಣ ಆಫ್ರಿಕಾ: ಐಡೆನ್ ಮರ್ಕ್ರಮ್(ನಾಯಕ), ಒಟ್ನೀಲ್ ಬಾರ್ಟ್ಮ್ಯಾನ್, ಜೆರಾಲ್ಡ್ ಕೊಯೆಟ್ಝಿ, ಡೊನಾವನ್ ಫೆರೀರಾ, ರೀಝಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸನ್, ಹೆನ್ರಿಚ್ ಕ್ಲಾಸೆನ್, ಪ್ಯಾಟ್ರಿಕ್ ಕ್ರುಗರ್,ಕೇಶವ ಮಹಾರಾಜ್, ಡೇವಿಡ್ ಮಿಲ್ಲರ್, ಮಿಹ್ಲಾಲಿ ಎಂಪೊಂಗ್ವಾನಾ, ಪೀಟರ್, ರಿಯಾನ್ ರಿಕೆಲ್ಟನ್, ಆಂಡಿಲ್ ಸಿಮೆಲಾನ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್.