ವಿಶ್ವಕಪ್: ನ್ಯೂಝಿಲ್ಯಾಂಡ್ ವಿರುದ್ಧ ದಕ್ಷಿಣ ಆಫ್ರಿಕಾಗೆ 190 ರನ್ ಗಳ ಭರ್ಜರಿ ಗೆಲುವು
ಕೇಶವ್ ಮಹಾರಾಜ್ ಸ್ಪಿನ್ ದಾಳಿಗೆ ತತ್ತರಿಸಿದ ಕಿವೀಸ್
ಮಾರ್ಕೊ ಜಾನ್ಸನ್ (Photo credit: X/@ProteasMenCSA)
ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ದಕ್ಷಿಣ ಆಫ್ರಿಕಾ 190 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಮೊನ್ನೆ ಆಸ್ಟ್ರೇಲಿಯ ವಿರುದ್ಧ ಬೃಹತ್ ಮೊತ್ತ ಬೆನ್ನಟ್ಟುವಲ್ಲಿ ಕೊನೆವರೆಗೂ ಹೋರಾಡಿದ್ದ ಕಿವೀಸ್ ಪಡೆ ಇಂದು ದಕ್ಷಿಣ ಆಫ್ರಿಕಾ ವಿರುದ್ದ ಬ್ಯಾಟಿಂಗ್ ವೈಫಲ್ಯದಿಂದ ಮುಗ್ಗರಿಸಿದೆ. ಪರಿಣಾಮ ದಕ್ಷಿಣ ಆಫ್ರಿಕಾ ತಂಡ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುದರೊಂದಿಗೆ ಬಹುತೇಕ ಸೆಮೀಸ್ ಟಿಕೆಟ್ ಖಚಿತ ಪಡಿಸಿಕೊಂಡಿದೆ. ಹ್ಯಾಟ್ರಿಕ್ ಸೋಲು ಅನುಭವಿಸಿದ ನ್ಯೂಝಿಲ್ಯಾಂಡ್ ತಂಡ ಸೆಮೀಸ್ ಗೆ ಏರಬೇಕಾದರೆ ಮುಂದಿನ ಪಂದ್ಯ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.
ಕ್ವಿಂಟನ್ ಡಿಕಾಕ್ ಹಾಗೂ ರಾಸ್ಸಿ ವಾನ್ ಡರ್ ಡುಸ್ಸೆನ್ ಆಕರ್ಷಕ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 357 ರನ್ ಪೇರಿಸಿತ್ತು. ಈ ಕಠಿಣ ಗುರಿ ಬೆನ್ನಟ್ಟಲು ಬ್ಯಾಟಿಂಗ್ ಗೆ ಇಳಿದಿದ್ದ ನ್ಯೂಝಿಲ್ಯಾಂಡ್ ತಂಡ ಟೂರ್ನಿಯಲ್ಲಿ ಮೊದಲ ಬಾರಿಗೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ನ್ಯೂಝಿಲ್ಯಾಂಡ್ ಪರ ಓಪನರ್ ಡೆವಾನ್ ಕಾನ್ವೆ 2 ರನ್ ಬಾರಿಸಿ ಮಾರ್ಕೊ ಜಾನ್ಸನ್ ಬೌಲಿಂಗ್ ನಲ್ಲಿ ಔಟ್ ಆದರೆ ವಿಲ್ ಯಂಗ್ 33 ರನ್ ಬಾರಿಸಿ ಜೆರಾಲ್ಡ್ ಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ರಚಿನ್ ರವೀಂದ್ರ 9 ರನ್ ಗಳಿಸುವಷ್ಟರಲ್ಲಿ ಮಾರ್ಕೊ ಜಾನ್ಸನ್ ಬೌಲಿಂಗ್ ನಲ್ಲಿ ಜೆರಾಲ್ಡ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದ ಡೆರಿಲ್ ಮಿಚೆಲ್ 24 ರನ್ ಗಳಿದರೆ ನಾಯಕ ಟಾಮ್ ಲ್ಯಾಥಮ್ 4 ರನ್ ಗೆ ಇನ್ನಿಂಗ್ಸ್ ಮುಗಿಸಿದರು. ಹರಿಣಗಳ ವಿರುದ್ದ ರನ್ ಗಳಿಸಲು ಗ್ಲೇನ್ ಫಿಲಿಪ್ಸ್ ಏಕಾಂಗಿ ಪ್ರಯತ್ನ ಮಾಡಿದರೂ ಅವರಿಗೆ ಇತರರು ಸಾಥ್ ನೀಡಲಿಲ್ಲ. ಕಡೆಗೆ 4 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ 60 ಗಳಿಸಿದ ಗ್ಲೇನ್ ಫಿಲಿಪ್ಸ್ ಅರ್ಧಶತಕ ಪೂರ್ಣಗೊಳಿಸಿ ಜೆರಾಲ್ಡ್ ಗೆ ವಿಕೆಟ್ ನೀಡಿದರು ಪರಿಣಾಮ ನ್ಯೂಝಿಲ್ಯಾಂಡ್ 167 ಕ್ಕೆ ಆಲೌಟ್ ಆಯಿತು. ಸಾಂಟ್ನರ್ 7, ಟಿಮ್ ಸೌಥಿ 7, ಬೌಲ್ಟ್ 9, ಗಳಿಸಿದರೆ ಜೇಮ್ಸ್ ನೀಶಮ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ನ್ಯೂಝಿಲ್ಯಾಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಪಿನ್ನರ್ ಕೇಶವ್ ಮಹಾರಾಜ್ 4 ವಿಕೆಟ್ ಪಡೆದುಕೊಂಡರೆ, ಮಾರ್ಕೊ ಜಾನ್ಸನ್ 3 ಮತ್ತು ಜೆರಾಲ್ಡ್ 2 ವಿಕೆಟ್ ಕಗಿಸೊ ರಬಾಡ ಒಂದು ವಿಕೆಟ್ ಕಬಳಿಸಿದರು.
ಈ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ನ್ಯೂಝಿಲ್ಯಾಂಡ್ ಬೌಲಿಂಗ್ ಆಯ್ದುಕೊಂಡಿತು. ಇತ್ತ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಹರಿಣ ಬ್ಯಾಟರ್ಸ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಟೂರ್ನಿಯುದ್ದಕ್ಕೂ ಅದ್ಬುತ ಪ್ರದರ್ಶನ ನೀಡುತ್ತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ತೆಂಬಾ ಬವುಮ ಬ್ಯಾಟಿಂಗ್ ವೈಫಲ್ಯ ನಿರಂತರವಾಗಿ ಕಾಡುತ್ತಿದೆ. ಇಂದು ಆರಂಭಿಕರಾಗಿ ಬ್ಯಾಟಿಂಗ್ ಗೆ ಇಳಿದಿದ್ದ ತೆಂಬಾ ಬವುಮ 24 ರನ್ ಗಳಿಸಿ ಟ್ರೆಂಟ್ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದರು. ಬವುಮ ವಿಕೆಟ್ ಪತನದ ಬಳಿಕ ಜೊತೆಯಾದ ರಾಸ್ಸಿ ವಾನ್ ಡರ್ ಡುಸ್ಸನ್ ಹಾಗೂ ಕ್ವಿಂಟನ್ ಡಿಕಾಕ್ ಜೋಡಿ ಕಿವೀಸ್ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದರು. ಪ್ರತಿಯೊಂದು ಬಾಲ್ ದಂಡಿಸಿದ ಈ ಜೋಡಿ ಅವಳಿ ಶತಕ ಸಿಡಿಸಿ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು. ಹರಿಣಗಳ ಬ್ಯಾಟಿಂಗ್ ಬೆನ್ನೆಲುಬು ಕ್ವಿಂಟನ್ ಡಿಕಾಕ್ 116 ಎಸೆತಗಳಲ್ಲಿ 10 ಬೌಂಡರಿ 3 ಸಿಕ್ಸರ್ ಸಹಿತ 114 ರನ್ ಬಾರಿಸಿ ಟೂರ್ನಿಯಲ್ಲಿ ನಾಲ್ಕನೇ ಶತಕ ಸಿಡಿಸಿ ಸಂಭ್ರಮಿಸಿದರೆ, ರಾಸ್ಸಿ ವಾನ್ ಡರ್ ಡುಸ್ಸನ್ 118 ಎಸೆತಗಳಲ್ಲಿ 9 ಬೌಂಡರಿ 5 ಸಿಕ್ಸರ್ ಸಹಿತ 133 ರನ್ ಸ್ಟೋಟಕ ಶತಕ ಬಾರಿಸಿ ಟಿಮ್ ಸೌಥಿ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಬಳಿಕ ತಂಡದ ಗುರಿ ಮುನ್ನೂರು ಐವತ್ತು ದಾಟಿಸುವಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಡೇವಿಡ್ ಮಿಲ್ಲರ್ 53 ರನ್ ಬಾರಿಸಿದರೆ ಅವರಿಗೆ ಸಾಥ್ ನೀಡಿದ್ದ ಹೆನ್ರಿ ಕ್ಲಾಸನ್15 ರನ್ ಮಾರ್ಕ್ರಮ್ 6 ರನ್ ಗಳಿಸಿದರು.
ನ್ಯೂಝಿಲ್ಯಾಂಡ್ ಪರ ಟಿಮ್ ಸೌಥಿ 2 ವಿಕೆಟ್ ಪಡೆದರೆ ಟ್ರೆಂಟ್ ಬೌಲ್ಟ್ ಹಾಗೂ ನೀಶಮ್ ತಲಾ ಒಂದು ವಿಕೆಟ್ ಪಡೆದರು.