ಶತಕ ವಂಚಿತ ಒಮರ್ಝೈ : ಹರಿಣಗಳಿಗೆ 245 ರನ್ ಗಳ ಗುರಿ ನೀಡಿದ ಅಫ್ಘಾನ್
ಅಫ್ಘಾನ್ ಆಲೌಟ್, ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೊಯೆಟ್ಝಿಗೆ ನಾಲ್ಕು ವಿಕೆಟ್
Photo : cricketworldcup.com
ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾ ಗೆಲುವಿಗೆ 245 ರನ್ಗಳ ಗುರಿ ನೀಡಿದೆ.
ಸೆಮೀಸ್ ಗೇರಲು ದೊಡ್ಡ ಮೊತ್ತದ ಗೆಲುವಿನ ಅವಶ್ಯಕತೆ ಹೊಂದಿದ್ದ ಅಫ್ಘಾನ್ ತಂಡ ಹರಿಣಗಳ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಅಯ್ದುಕೊಂಡಿತು. ಆದರೆ ನಾಯಕನ ಯೋಜನೆಗೆ ವ್ಯತಿರಿಕ್ತವಾಗಿ ಬ್ಯಾಟ್ ಬೀಸಿದ ಅಫ್ಘಾನ್ ದಾಂಢಿಗರು, ದಕ್ಷಿಣ ಆಫ್ರಿಕಾ ಬಲಿಷ್ಠ ಬೌಲಿಂಗ್ ಮುಂದೆ ರನ್ ಗಳಿಸಲಾಗದೇ ಪರದಾಡಿದರು. ಅಫ್ಘಾನ್ ಪರ ಆರಂಭಿಕರಿಬ್ಬರೂ ಮೊದಲ ವಿಕೆಟ್ ಪತನಕ್ಕೆ 8.1 ಓವರ್ ಗಳಲ್ಲಿ 41 ರನ್ ಗಳ ಜೊತೆಯಾಟ ನೀಡಿದರು. ರಹ್ಮತುಲ್ಲಾ ಗುರ್ಬಾಝ್ 25 ರನ್ ಗೆ ಮಹರಾಜ್ ಸ್ಪಿನ್ ದಾಳಿಯಲ್ಲಿ ಕ್ಲಾಸನ್ ಗೆ ಕ್ಯಾಚಿತ್ತು ಔಟ್ ಆದರೆ, ಕಳೆದ ಪಂದ್ಯದ ಶತಕ ವೀರ ಇಬ್ರಾಹೀಂ ಝದ್ರಾನ್ ಕೇವಲ 15 ರನ್ ಗೆ ಸೀಮಿತರಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಹ್ಮತ್ ಶಾ 26 ರನ್ ಬಾರಿಸಿ ಲುಂಗಿ ಎನ್ ಗಿಡಿ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿದರು. 10.3 ಓವರ್ ಒಳಗೆ ತನ್ನ ಪ್ರಮುಖ ಮೂವರು ಬ್ಯಾಟರ್ ಗಳನ್ನು ಕಳೆದುಕೊಂಡ ಅಫ್ಘಾನ್ ದೊಡ್ಡ ಮೊತ್ತ ಪೇರಿಸಿ ಸೆಮೀಸ್ ಗೆ ಅರ್ಹತೆ ಪಡೆಯುವ ಕನಸು ಕಮರಿತೊಡಗಿತು. ಬಳಿಕ ಬ್ಯಾಟಿಂಗ್ ಬಂದ ನಾಯಕ ಹಶ್ಮತುಲ್ಲಾ ಶಾಹಿದಿ 2 ರನ್ ಗಳಿಸಿದರೆ ಇಕ್ರಮ್ ಅಲಿಖಿಲ್ 12 ರನ್ ಪೇರಿಸಿ ಕ್ರಮಾವಾಗಿ ಮಹಾರಾಜ್, ಜೆರಾಲ್ಡ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಅಫ್ಘಾನಿಸ್ತಾನ ಪರ ಏಕಾಂಗಿ ಬ್ಯಾಟಿಂಗ್ ಮೂಲಕ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡ ಅಝ್ಮತುಲ್ಲಾ ಒಮರ್ಝೈ 107 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ ಸಹಿತ 97 ರನ್ ಬಾರಿಸಿ ಶತಕ ವಂಚಿತರಾದರು. ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ಮುಹಮ್ಮದ್ ನಬಿ 2, ರಶೀದ್ ಖಾನ್ 14 ಹಾಗೂ ಮುಜೀಬ್ 8 ಗಳಿಸಿದರೆ, ಒಂಭತ್ತನೇ ಕ್ರಮಾಂಕದಲ್ಲಿ ನೂರ್ ಅಹ್ಮದ್ 26 ರನ್ ಉಪಯುಕ್ತ ಕೊಡುಗೆ ನೀಡಿದರು. ನವೀನ್ ಉಲ್ ಹಕ್ 2 ರನ್ ಗಳಿಸಿ ರನೌಟ್ ಆದರು.
ಅಫ್ಘಾನಿಸ್ತಾನ ಕಡಿಮೆ ರನ್ ಕಟ್ಟಿ ಹಾಕುವಲ್ಲಿ ಸಂಘಟಿತ ಪ್ರದರ್ಶನ ತೋರಿದ ಹರಿಣಗಳ ಪರ ಜೆರಾಲ್ಡ್ ಕೊಯೆಟ್ಝಿ 4 ವಿಕೆಟ್ ಪಡೆದು ಮಿಂಚಿದರು. ಲುಂಗಿ ಎನ್ ಗಿಡಿ ಹಾಗೂ ಕೇಶವ್ ಮಹರಾಜ್ ತಲಾ 2 ವಿಕೆಟ್ ಪಡೆದರು. ಅಂಡಿಲೆ ಫೆಲುಕ್ವಾಯೋ ಒಂದು ವಿಕೆಟ್ ಕಬಳಿಸಿದರು