ಮಹ್ಮುದುಲ್ಲಾ ಹೋರಾಟ ವ್ಯರ್ಥ, ಬಾಂಗ್ಲಾ ವಿರುದ್ಧ ದಕ್ಷಿಣ ಆಫ್ರಿಕಾ ಗೆ 149 ರನ್ ಗಳ ಜಯ
ವಿಶ್ವಕಪ್ : ದಕ್ಷಿಣ ಆಫ್ರಿಕಾ ಬ್ಯಾಟರ್ ಗಳ ಅಬ್ಬರ, ಸೋತ ಬಾಂಗ್ಲಾದೇಶ
PHOTO : x/@ProteasMenCSA
ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶದ ಮಹ್ಮುದುಲ್ಲಾ ಏಕಾಂಗಿ ಹೋರಾಟದ ಹೊರತಾಗಿಯೂ ಬಾಂಗ್ಲಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 149 ರನ್ ಜಯಗಳಿಸಿದೆ.
ತಂಡ ಸಂಕಷ್ಟಕ್ಕೆ ಸಿಲುಕಿ ಬೇಗನೇ ಆಲೌಟ್ ಆಗುವ ಸಂದರ್ಭದಲ್ಲಿ ರಕ್ಷಣಾತ್ಮಕ ಆಟವಾಡುತ್ತಾ ಏಕಾಂಗಿ ಹೋರಾಟ ಮಾಡಿದ ಮಹ್ಮುದುಲ್ಲಾ, ಬಾಂಗ್ಲಾವನ್ನು ಗೆಲುವಿನ ಗುರಿಗೆ ಕೊಂಡೊಯ್ಯುವ ಆಶಾ ಭಾವನೆಯ ಆಟ ಪ್ರದರ್ಶಿಸಿದರು. ಶತಕ ಗಳಿಸಿದ ಅವರು, 111 ಎಸೆತಗಳಲ್ಲಿ 4 ಸಿಕ್ಸರ್, 11 ಬೌಂಡರಿಗಳೊಂದಿಗೆ 111 ರನ್ ಸಿಡಿಸಿ ಜೆರಾಲ್ಡ್ ಕೊಎಟ್ಝೀ ಗೆ ವಿಕೆಟ್ ಒಪ್ಪಿಸಿದಾಗ ಬಾಂಗ್ಲಾದ ಹೋರಾಟ ಅಂತ್ಯವಾಗುವ ಮುನ್ಸೂಚನೆ ಬಂತು. 46.3 ಓವರ್ ಗಳಲ್ಲಿ ಬಾಂಗ್ಲಾ 233 ರನ್ ಗಳಿಸಿ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾ ನೀಡಿದ 383 ರನ್ ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ರಕ್ಷಣಾತ್ಮಕ ಆಟವಾಡಲು ಪ್ರಯತ್ನಿಸಿತು. 6.1 ಓವರ್ ಗಳಲ್ಲಿ 30 ರನ್ ಗಳಿಸಿದ್ದಾಗ ತಂಝೀದ್ ಹಸನ್ ಅವರು 12ರನ್ ಗಳಿಸಿ ಮಾರ್ಕೋ ಜಾನ್ಸನ್ ಬೌಲಿಂಗ್ ನಲ್ಲಿ ಹೆನ್ರಿಚ್ ಕ್ಲಾಸೆನ್ ಗೆ ಕ್ಯಾಚಿತ್ತಾಗ ಬಾಂಗ್ಲಾ ತಂಡ ವಿಚಲಿತವಾಯಿತು. ನಂತರ ಕ್ರೀಸ್ ಗೆ ಬಂದ ನಜ್ಮುಲ್ ಹುಸೈನ್ ಶಂಟೋ ಅವರು ಒಂದೇ ಬಾಲ್ ಎದುರಿಸಿ 6.2 ಓವರ್ ಗಳಲ್ಲಿ ಹೆನ್ರಿಚ್ ಕ್ಲಾಸೆನ್ ಗೆ ಕ್ಯಾಚಿತ್ತು ಮಾರ್ಕೋ ಜಾನ್ಸನ್ ಗೆ ವಿಕೆಟ್ ಒಪ್ಪಿಸಿ ಹ್ಯಾಟ್ರಿಕ್ ಅವಕಾಶ ನೀಡಿದರು.
ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅದಕ್ಕೆ ಅವಕಾಶ ನೀಡಲಿಲ್ಲ. ಮಾರ್ಕೋ ಜಾನ್ಸನ್ ಹ್ಯಾಟ್ರಿಕ್ ಅವಕಾಶ ವಂಚಿತರಾದರು. 4 ಬಾಲ್ ಎದುರಿಸಿ 1 ರನ್ ಗಳಿಸಿದ ಶಕೀಬ್ ಅಲ್ ಹಸನ್ 7.2 ಓವರ್ ಗಳಲ್ಲಿ ಲಿಝಾರ್ಡ್ ವಿಲಿಯಮ್ಸ್ ಅವರ ಬೌಲಿಂಗ್ ನಲ್ಲಿ ಹೆನ್ರಿಚ್ ಕ್ಲಾಸೆನ್ ಗೆ ಕ್ಯಾಚಿತ್ತು ಕ್ರೀಸ್ ನಿಂದ ನಿರ್ಗಮಿಸಿದರು. ಒಂದು ರನ್ ಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡ ಬಾಂಗ್ಲಾ ತಂಡಕ್ಕೆ ದಕ್ಷಿಣ ಆಫ್ರಿಕಾ ದೊಡ್ಡ ಆಘಾತ ನೀಡಿತು.
11.5 ಓವರ್ ಗಳಲ್ಲಿ ವಿಕೆಟ್ ಕೀಪರ್ ಮುಷ್ಫಿಕುರ್ ರಹೀಮ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಸ್ವಲ್ಪ ಮಟ್ಟಿಗೆ ಕೀಸ್ ನಲ್ಲಿ ನಿಲ್ಲುವ ಪ್ರಯತ್ನ ಮಾಡಿದ ಲಿಟನ್ ದಾಸ್ 44 ಎಸೆತಗಳಲ್ಲಿ ಒಂದು ಸಿಕ್ಸರ್, ಮೂರು ಬೌಂಡರಿಯೊಂದಿಗೆ 22 ರನ್ ಗಳಿಸಿದ್ದಾಗ 14.6 ಓವರ್ ಗಳಲ್ಲಿ ಕಾಗಿಸೋ ರಬಡಾ ಅವರ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು. ಮೆಹದಿ ಹಸನ್ 11, ನಸುಮ್ ಅಹ್ಮದ್ 19 ಗಳಿಸಿ ಪೆವಿಲಿಯನ್ ಓಟ ಮುಂದುವರಿಸಿದರು.
25 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 15 ರನ್ ಗಳಿಸಿದ ಹಸನ್ ಮಹ್ಮೂದ್ ತಂಡದ ರನ್ ರೇಟ್ ಉಳಿಸುವ ಪ್ರಯತ್ನ ಮಾಡಿದರಾದರೂ, ವಿಫಲರಾದರು. ಮುಸ್ತಫೀಝುರ್ರಹ್ಮಾನ್ 11, ಶೊರೀಫುಲ್ ಇಸ್ಲಾಂ 6 ರನ್ ಗಳಿಸಿದರು.
ಮೇಡನ್ ಓವರ್ ಗಳೊಂದಿಗೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಬೌಲರ್ ಗಳು ಬಾಂಗ್ಲಾದೇಶದ ಬ್ಯಾಟರ್ ಗಳಿಗೆ ಪೆವಿಲಿಯನ್ ಹಾದಿ ಬೇಗನೇ ತೋರಿಸಿ ತಂಡವನ್ನು ಕಟ್ಟಿ ಹಾಕಿದರು. ಕಾಗಿಸೋ ರಬಡ 10 ಓವರ್ಗಳಲ್ಲಿ ಒಂದು ಮೇಡನ್ ಓವರ್ ಸಹಿತ 2 ವಿಕೆಟ್ ಪಡೆದರು. ಜೆರಾಲ್ಡ್ ಕೊಎಟ್ಝೀ 3 ವಿಕೆಟ್ ಪಡೆದರು. ಮಾರ್ಕೋ ಜಾನ್ಸನ್ 8 ಓವರ್ ಗಳಲ್ಲಿ 39 ರನ್ ನೀಡಿ 2 ವಿಕೆಟ್ ಪಡೆದರು. ಲಿಝಾರ್ಡ್ ವಿಲಿಯಮ್ಸ್ 8.4 ಓವರ್ ಗಳಲ್ಲಿ 56 ರನ್ ನೀಡಿ ಒಂದು ಮೇಡನ್ ಓವರ್ ಸಹಿತ 2 ವಿಕೆಟ್ ಪಡೆದರು. ಕೇಶವ್ಮ ಹರಾಜ್ 10 ಓವರ್ ಗಳಲ್ಲಿ 32 ರನ್ ನೀಡಿ 1 ವಿಕೆಟ್ ಪಡೆದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಪಿಚ್ ನಲ್ಲಿ ಬಾಂಗ್ಲಾ ಬೌಲರ್ ಗಳನ್ನು ದಂಡಿಸುವ ಮೂಲಕ ಉತ್ತಮ ರನ್ ಪೇರಿಸಿತು. 10 ಓವರ್ ಗಳಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ಸಾಧಾರಣ ಮೊತ್ತ ಗಳಿಸುವ ಮುನ್ಸೂಚನೆ ನೀಡಿದಂತಿತ್ತು. ಆದರೆ ಕ್ವಿಂಟನ್ ಡಿ ಕಾಕ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ವಾಂಖೆಡೆಯಲ್ಲಿ ನೆರೆದಿದ್ದ ಕ್ರಿಕೆಟ್ ಪ್ರಿಯರ ಮನ ತಣಿಸಿತು. ಪರಿಣಾಮ ಕ್ವಿಂಟನ್ ಡಿ ಕಾಕ್ ನಿವೃತ್ತಿಯ ನಿರ್ಧಾರ ಬದಲಿಸಿ ಎನ್ನುವ ಪೋಸ್ಟರ್ ಗಳು ರಾರಾಜಿಸಿದವು.
ಡಿʼಕಾಕ್ ಭರ್ಜರಿ ಹೊಡೆತಗಳು, ಅದಾಗಲೇ 2023 ವಿಶ್ವಕಪ್ ನಲ್ಲಿ 3 ಶತಕ ದಾಖಲಿಸಿದ ಮೊದಲ ಬ್ಯಾಟರ್ ಗರಿಮೆ ತಂದಿತು. ವಾಂಖೆಡೆಯ ಅಷ್ಟ ದಿಕ್ಕುಗಳಿಗೂ ತಮ್ಮ ಬ್ಯಾಟ್ನಿಂದ ಸಿಡಿದ ಹೊಡೆತಗಳ ಮೂಲಕ ಬಾಲ್ ಮುಟ್ಟಿಸಿದ ಡಿ ಕಾಕ್ ದ್ವಿ ಶತಕ ದಾಖಲಿಸಬಹುದು ಎನ್ನುವ ಆಶಾವಾದ ಹುಟ್ಟಿಸಿತು. ಆದರೆ, ಕ್ವಿಂಟನ್ ಡಿʼಕಾಕ್ 140 ಎಸೆತಗಳಲ್ಲಿ 15 ಬೌಂಡರಿ, 7 ಸಿಕ್ಸರ್ ಗಳೊಂದಿಗೆ 174 ರನ್ ಗಳಿಸಿದ್ದಾಗ ಹಸನ್ ಮಹ್ಮೂದ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಹೋಗಿ ಬೌಂಡರಿ ಲೈನ್ ನಲ್ಲಿ ನಸೂಮ್ ಅಹ್ಮದ್ ಗೆ ಕ್ಯಾಚಿತ್ತು ಔಟ್ ಆದರು. ದ್ವಿಶತಕ ಸಾಧನೆ ಮಾಡುವ ಅವಕಾಶದಿಂದ ವಂಚಿತರಾದರು.
ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಹೆನ್ರಿಚ್ ಕ್ಲಾಸೆನ್ ಬೀಸುವ ಹೊಡೆತಗಳಿಂದ ಏಕದಿನ ವಿಶ್ವಕಪ್ ಗೆ ಟಿ 20ಯ ವೇಗ ನೀಡಿದರು. 49 ಎಸೆತಗಳಲ್ಲಿ 90 ರನ್ ಗಳಿಸಿದ ಅವರು 8 ಸಿಕ್ಸರ್, 2 ಬೌಂಡರಿಗಳೊಂದಿಗೆ ವೇಗದ ಶತಕ ದಾಖಲಿಸಬಹುದು ಎನ್ನುವ ಮುನ್ಸೂಚನೆ ನೀಡಿದ್ದರು. ಆದರೆ 90 ರನ್ ಗಳಿಸಿದ್ದಾಗ ವೈಡ್ ಬಾಲ್ ಗೆ ಸಿಕ್ಸರ್ ಎತ್ತಲು ಹೋಗಿ ಹಸನ್ ಮಹ್ಮೂದ್ ಬೌಲಿಂಗ್ ನಲ್ಲಿ ಮಹಮ್ಮದುಲ್ಲಾಗೆ ಬೌಂಡರಿ ಲೈನ್ ನಲ್ಲಿ ಕ್ಯಾಚಿತ್ತು ನಿರಾಸೆ ಮೂಡಿಸಿದರು.
ಹಂಗಾಮಿ ನಾಯಕ ಐಡೆನ್ ಮಾರ್ಕ್ರಮ್ 69 ಬೌಲ್ ಗಳಲ್ಲಿ 7 ಬೌಂಡರಿ ಬಾರಿಸುವ ಮೂಲಕ ಅರ್ಧ ಶತಕದೊಂದಿಗೆ 60 ರನ್ ಗಳಿಸಿ ಶಕೀಬ್ ಅಲ್ ಹಸನ್ ಬೌಲಿಂಗ್ ನಲ್ಲಿ ಲಿಟನ್ ದಾಸ್ ಗೆ ಕ್ಯಾಚಿತ್ತು ಔಟ್ ಆದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಡೇವಿಡ್ ಮಿಲ್ಲರ್ 15 ಬಾಲ್ಗಳಲ್ಲಿ 4 ಸಿಕ್ಸರ್, 1 ಬೌಂಡರಿಯೊಂದಿಗೆ 34 ರನ್ ಸಿಡಿಸಿ ಉತ್ತಮ ರನ್ ಪೇರಿಸಿದರು. ರಿಝಾ ಹೆಂಡ್ರಿಕ್ಸ್ 12, ಎಂ ಜಾನ್ಸ್ನ್ 1 ರನ್ ಗಳಿಸಿದರು.
ಬಾಂಗ್ಲಾದೇಶದ ಬೌಲರ್ ಹಸನ್ ಮಹ್ಮೂದ್ 6 ಓವರ್ ಗಳಲ್ಲಿ 67 ರನ್ ನೀಡುವ ಮೂಲಕ ಬಲು ದುಬಾರಿ ಎನಿಸಿದರು. ಮುಸ್ತಫಿಝುರ್ರಹ್ಮಾನ್, ಶೊರೀಫುಲ್ ಇಸ್ಲಾಂ ತಲಾ 9 ಓವರ್ ಗಳಲ್ಲಿ 76 ರನ್ ನೀಡಿದರು. ಶಕೀಬ್ ಅಲ್ ಹಸನ್ 9 ಓವರ್ ಗೆ 69 ರನ್ ನೀಡಿದರು. ಹಸನ್ ಮಹ್ಮೂದ್ 2 ವಿಕೆಟ್ ಪಡೆದರು. ಮುಸ್ತಫಿಝುರ್ರಹ್ಮಾನ್, ಶೊರೀಫುಲ್ ಇಸ್ಲಾಂ, ಮೆಹದಿ ಹಸನ್ ತಲಾ 1 ವಿಕೆಟ್ ಪಡೆದರು.