ದ್ವಿತೀಯ ಟೆಸ್ಟ್: ಪಾಕಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾ ಜಯಭೇರಿ
PC : PTI
ಕೇಪ್ಟೌನ್: ಆಲ್ರೌಂಡ್ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನು 10 ವಿಕೆಟ್ಗಳ ಅಂತರದಿಂದ ಗೆದ್ದುಕೊಂಡಿದೆ.ಈ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ಫಾಲೋ ಆನ್ಗೆ ತುತ್ತಾದ ಪಾಕಿಸ್ತಾನ ತಂಡವು 4ನೇ ದಿನದಾಟವಾದ ಸೋಮವಾರ ತನ್ನ 2ನೇ ಇನಿಂಗ್ಸ್ನಲ್ಲಿ 478 ರನ್ ಗಳಿಸಿದ್ದರೂ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಕೇವಲ 58 ರನ್ ಗುರಿ ನೀಡಿತು.
ದಕ್ಷಿಣ ಆಫ್ರಿಕಾ ತಂಡ 7.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿತು. ಡೇವಿಡ್ ಬೆಡಿಂಗ್ಹ್ಯಾಮ್(ಔಟಾಗದೆ 44 ರನ್)ಹಾಗೂ ಮರ್ಕ್ರಮ್(14 ರನ್)ಅಜೇಯವಾಗುಳಿದರು.
ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್ 615 ರನ್ಗೆ ಉತ್ತರವಾಗಿ ಪಾಕಿಸ್ತಾನ ತಂಡ 194 ರನ್ಗೆ ಆಲೌಟಾಗಿ ಫಾಲೋ ಆನ್ಗೆ ಸಿಲುಕಿತು.
ಇದಕ್ಕೂ ಮೊದಲು 1 ವಿಕೆಟ್ ನಷ್ಟಕ್ಕೆ 213 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ ತಂಡ 478 ರನ್ ಗಳಿಸಿ ಆಲೌಟಾಯಿತು.
ಔಟಾಗದೆ 102 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಮಸೂದ್ 145 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಸಲ್ಮಾನ್ ಅಲಿ(48 ರನ್), ಮುಹಮ್ಮದ್ ರಿಝ್ವಾನ್(41 ರನ್), ಆಮಿರ್ ಜಮಾಲ್(34 ರನ್), ಕಾಮ್ರಾನ್ ಗುಲಾಂ(28 ರನ್)ಹೋರಾಟ ನೀಡಿದ್ದರೂ ಆಫ್ರಿಕಾ ತಂಡದ ಗೆಲುವಿಗೆ ಕಠಿಣ ಗುರಿ ನೀಡಲು ಸಾಧ್ಯವಾಗಲಿಲ್ಲ.
ಆಫ್ರಿಕಾ ತಂಡದ ಬೌಲಿಂಗ್ ವಿಭಾಗದಲ್ಲಿ ವೇಗಿ ಕಾಗಿಸೊ ರಬಾಡ(3-115)ಹಾಗೂ ಸ್ಪಿನ್ನರ್ ಕೇಶವ ಮಹಾರಾಜ್(3-137)ತಲಾ ಮೂರು ವಿಕೆಟ್ಗಳನ್ನು ಪಡೆದರು. ಜಾನ್ಸನ್(2-101)ಎರಡು ವಿಕೆಟ್ ಉರುಳಿಸಿದರು.