ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ | ಆಸ್ಟ್ರೇಲಿಯ ವಿರುದ್ಧ ಸರಣಿ ಕ್ಲೀನ್ಸ್ವೀಪ್ಗೈದ ಶ್ರೀಲಂಕಾ

Photo Credit | X/@ICC
ಕೊಲಂಬೊ: ಕುಸಾಲ್ ಮೆಂಡಿಸ್ ಶತಕ(101ರ ನ್, 115 ಎಸೆತ), ಚರಿತ್ ಅಸಲಂಕಾ(ಔಟಾಗದೆ 78, 66 ಎಸೆತ)ಹಾಗೂ ನಿಶಾನ್ ಮದುಷ್ಕ(51 ರನ್, 70 ಎಸೆತ)ಅರ್ಧಶತಕಗಳ ಕೊಡುಗೆ, ಸ್ಪಿನ್ನರ್ ಡುನಿತ್ ವೆಲ್ಲಲಗೆ(4-35) ನೇತೃತ್ವದ ಬೌಲರ್ಗಳ ಸಂಘಟಿತ ಪ್ರಯತ್ನದ ಫಲವಾಗಿ ಆತಿಥೇಯ ಶ್ರೀಲಂಕಾ ಕ್ರಿಕೆಟ್ ತಂಡವು ಆಸ್ಟ್ರೇಲಿಯ ವಿರುದ್ಧದ 2ನೇ ಏಕದಿನ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 174 ರನ್ ಅಂತರದಿಂದ ಜಯಶಾಲಿಯಾಗಿದೆ. ಈ ಮೂಲಕ 2 ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡು ಕ್ಲೀನ್ಸ್ವೀಪ್ ಸಾಧಿಸಿದೆ.
ಮುಂಬರುವ ಚಾಂಪಿಯನ್ಸ್ ಟ್ರೋಫಿಗಿಂತ ಮೊದಲು ಸತ್ವ ಪರೀಕ್ಷೆಗೆ ಒಳಗಾದ ಆಸ್ಟ್ರೇಲಿಯದ ಬ್ಯಾಟಿಂಗ್ ಸರದಿಯು 282 ರನ್ ಗುರಿ ಬೆನ್ನಟ್ಟುವಾಗ 24.2 ಓವರ್ಗಳಲ್ಲಿ ಕೇವಲ 107 ರನ್ ಗಳಿಸಿ ಆಲೌಟಾಯಿತು. ಕೊನೆಯ 7 ವಿಕೆಟ್ಗಳನ್ನು ಕೇವಲ 28 ರನ್ ಗಳಿಸುವಷ್ಟರಲ್ಲಿ ಕಳೆದುಕೊಂಡಿತು. ನಾಯಕ ಸ್ಟೀವ್ ಸ್ಮಿತ್(29 ರನ್, 34 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು.
ಅಸಿಥ ಫೆರ್ನಾಂಡೊ(3-23) ಆಸ್ಟ್ರೇಲಿಯದ ಅಗ್ರ ಸರದಿಯ ಮೂವರು ಆಟಗಾರರನ್ನು ಬೇಗನೆ ಪೆವಿಲಿಯನ್ಗೆ ಕಳುಹಿಸಿದರು. ಆನಂತರ ಶ್ರೀಲಂಕಾದ ಸ್ಪಿನ್ನರ್ಗಳು ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದರು. ವೆಲ್ಲಲಗೆ(4-35), ಜೋಶ್ ಇಂಗ್ಲಿಸ್ (22 ರನ್) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್(1 ರನ್)ಸಹಿತ ನಾಲ್ಕು ವಿಕೆಟ್ಗಳನ್ನು ಉರುಳಿಸಿ ಲಂಕಾದ ಗೆಲುವಿನ ಹಾದಿ ಸುಗಮಗೊಳಿಸಿದರು.
ಹಿರಿಯ ಸ್ಪಿನ್ನರ್ ವನಿಂದು ಹಸರಂಗ(3-23) ನಾಯಕ ಸ್ಟೀವ್ ಸ್ಮಿತ್(29 ರನ್)ಸಹಿತ ಮೂರು ವಿಕೆಟ್ಗಳನ್ನು ಉರುಳಿಸಿ ಶ್ರೀಲಂಕಾ ತಂಡವು ಹಾಲಿ ವಿಶ್ವ ಚಾಂಪಿಯನ್ ತಂಡವನ್ನು ದೊಡ್ಡ ಅಂತರದಿಂದ ಮಣಿಸಿ ಸರಣಿಯನ್ನು 2-0 ಅಂತರದಿಂದ ಗೆಲ್ಲುವಲ್ಲಿ ತನ್ನದೇ ಆದ ಕೊಡುಗೆ ನೀಡಿದರು.
2023ರ ವಿಶ್ವಕಪ್ನಲ್ಲಿ 9ನೇ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡವು ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತಿಲ್ಲ. ಈ ಗೆಲುವಿನ ಮೂಲಕ ಲಂಕಾ ತಂಡವು ಏಕದಿನ ರ್ಯಾಂಕಿಂಗ್ನಲ್ಲಿ 5ನೇ ಸ್ಥಾನಕ್ಕೇರಿದೆ.
*ಶ್ರೀಲಂಕಾ 281/4: ಪಿ.ಪ್ರೇಮದಾಸ ಸ್ಟೇಡಿಯಮ್ನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ವಿಕೆಟ್ಕೀಪರ್-ಬ್ಯಾಟರ್ ಕುಶಾಲ್ ಮೆಂಡಿಸ್ ನೇತೃತ್ವದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಟೀಕಾಕಾರರ ಬಾಯಿ ಮುಚ್ಚಿಸಿತು. ಮೆಂಡಿಸ್ ಏಕದಿನ ಕ್ರಿಕೆಟ್ನಲ್ಲಿ 5ನೇ ಹಾಗೂ ಆಸ್ಟ್ರೇಲಿಯದ ವಿರುದ್ಧ ಮೊದಲ ಶತಕ(101ರ ನ್, 115 ಎಸೆತ, 11 ಬೌಂಡರಿ)ಗಳಿಸಿದರು.
ನಿಶಾನ್ ಮದುಷ್ಕ (51 ರನ್, 70 ಎಸೆತ, 4 ಬೌಂಡರಿ, 1 ಸಿಕ್ಸರ್)ಹಾಗೂ ಅಸಲಂಕಾ(ಔಟಾಗದೆ 78, 66 ಎಸೆತ, 6 ಬೌಂಡರಿ, 3 ಸಿಕ್ಸರ್)ಅರ್ಧಶತಕ ಸಿಡಿಸಿ ಶ್ರೀಲಂಕಾ ತಂಡವು ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 281 ರನ್ ಗಳಿಸಲು ನೆರವಾದರು.
ಶ್ರೀಲಂಕಾ ತಂಡವು ಆರಂಭಿಕ ಆಟಗಾರ ಪಥುಮ್ ನಿಸ್ಸಾಂಕ(6 ರ ನ್) ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ ಕುಸಾಲ್ ಹಾಗೂ ಮದುಷ್ಕ ಎರಡನೇ ವಿಕೆಟ್ನಲ್ಲಿ 98 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಕುಸಾಲ್ ಆ ನಂತರ ಅಸಲಂಕಾ ಅವರೊಂದಿಗೆ 4ನೇ ವಿಕೆಟ್ಗೆ 94 ರನ್ ಜೊತೆಯಾಟದಲ್ಲಿ ಭಾಗಿಯಾದರು.
ಆಸ್ಟ್ರೇಲಿಯ ತಂಡವು ಪಾಕಿಸ್ತಾನ ಹಾಗೂ ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ತನ್ನ ತಂಡದಲ್ಲಿ ಐದು ಬದಲಾವಣೆಗಳನ್ನು ಮಾಡಿತ್ತು. ಮ್ಯಾಕ್ಸ್ವೆಲ್, ತನ್ವೀರ್ ಸಾಂಘಾ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ ಹಾಗೂ ಬೆನ್ ದ್ವಾರ್ಶುಯಿಸ್ ಅವಕಾಶ ಪಡೆದಿದ್ದಾರೆ.
ಅಲೆಕ್ಸ್ ಕ್ಯಾರಿ, ಮಾರ್ನಸ್ ಲ್ಯಾಬುಶೇನ್, ಕೂಪರ್ ಕೊನೊಲ್ಲಿ, ಸ್ಪೆನ್ಸಸ್ ಜಾನ್ಸನ್, ನಾಥನ್ ಎಲ್ಲಿಸ್ ಆಡುವ 11ರ ಬಳಗದಿಂದ ಹೊರಗುಳಿದರು.
‘‘ನಾವು ನಿರೀಕ್ಷಿಸಿದ ಉತ್ತಮ ಫಲಿತಾಂಶ ಬಂದಿಲ್ಲ. ನಾವು ಎಲ್ಲ ಆಟಗಾರನ್ನು ಬಳಸಿಕೊಂಡಿದ್ದು, ಎಲ್ಲರೂ ಪಂದ್ಯ ಆಡಬೇಕೆನ್ನುವುದು ನಮ್ಮ ಉದ್ದೇಶವಾಗಿತ್ತು. ಶ್ರೀಲಂಕಾ ತಂಡಕ್ಕೆ ಎಲ್ಲ ಶ್ರೇಯಸ್ಸು ಸಲ್ಲಬೇಕಾಗಿದೆ. ಅವರು ಸರಣಿ ಗೆಲ್ಲಲು ಅರ್ಹರಿದ್ದಾರೆ. ನಾವು ಕೊಲಂಬೊದಲ್ಲಿ ಪರದಾಟ ನಡೆಸಿದ್ದೇವೆ. ಶ್ರೀಲಂಕಾ ಬೌಲರ್ಗಳ ಪ್ರದರ್ಶನ ಅತ್ಯುತ್ತಮವಾಗಿತ್ತು’’ ಎಂದು ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಕುಶಾಲ್ ಮೆಂಡಿಸ್ ‘ಪಂದ್ಯಶ್ರೇಷ್ಠ’ ಹಾಗೂ ಚರಿತ್ ಅಸಲಂಕಾ ‘ಸರಣಿಶ್ರೇಷ್ಠ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಸಲಂಕಾ ಸರಣಿಯಲ್ಲಿ ಒಟ್ಟು 205 ರನ್ ಗಳಿಸಿದ್ದು, 1 ವಿಕೆಟ್ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್
*ಶ್ರೀಲಂಕಾ: 50 ಓವರ್ಗಳಲ್ಲಿ 281/4
(ಕುಸಾಲ್ ಮೆಂಡಿಸ್ 101, ಚರಿತ್ ಅಸಲಂಕಾ ಔಟಾಗದೆ 78, ನಿಶಾನ್ ಮದುಷ್ಕ 51, ಜನಿತ್ ಲಿಯನಗೆ ಔಟಾಗದೆ 32, ಅಬಾಟ್ 1-41)
*ಆಸ್ಟ್ರೇಲಿಯ: 24.2 ಓವರ್ಗಳಲ್ಲಿ 107 ರನ್ಗೆ ಆಲೌಟ್
(ಸ್ಟೀವನ್ ಸ್ಮಿತ್ 29, ಜೋಶ್ ಇಂಗ್ಲಿಸ್ 22, ಟ್ರಾವಿಸ್ ಹೆಡ್ 18, ಡುನಿತ್ ವೆಲ್ಲಲಗೆ 4-35, ವನಿಂದು ಹಸರಂಗ 3-23, ಅಸಿಥ ಫೆರ್ನಾಂಡೊ 3-23)
*ಪಂದ್ಯಶ್ರೇಷ್ಠ: ಕುಶಾಲ್ ಮೆಂಡಿಸ್
*ಸರಣಿಶ್ರೇಷ್ಠ: ಚರಿತ್ ಅಸಲಂಕಾ