ಟೆಸ್ಟ್ ಇತಿಹಾಸದಲ್ಲೇ ಕನಿಷ್ಠ ಮೊತ್ತಕ್ಕೆ ಆಲೌಟಾದ ಶ್ರೀಲಂಕಾ
PC : NDTV
ಡರ್ಬನ್ : ಡರ್ಬನ್ನ ಕಿಂಗ್ಸ್ಮೀಡ್ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದ ಎರಡನೇ ದಿನವಾದ ಗುರುವಾರ ಪ್ರವಾಸಿ ಶ್ರೀಲಂಕಾ ತಂಡವು ತನ್ನ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಸ್ಕೋರ್ಗೆ ಕುಸಿದಿದೆ. ಅದು ತನ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 42 ರನ್ಗಳನ್ನು ಗಳಿಸಿದೆ.
ಆತಿಥೇಯ ತಂಡದ ಮಾರ್ಕೊ ಜಾನ್ಸನ್ರ ಮಾರಕ ದಾಳಿಗೆ ಉತ್ತಮ ಫಾರ್ಮ್ನಲ್ಲಿರುವ ಶ್ರೀಲಂಕಾದ ದಾಂಡಿಗರು ಹೇಳಹೆಸರಿಲ್ಲದಂತಾದರು. ಜಾನ್ಸನ್ ಕೇವಲ 13 ರನ್ಗಳನ್ನು ನೀಡಿ 7 ವಿಕೆಟ್ಗಳನ್ನು ಉರುಳಿಸಿದರು. ಇದು ಟೆಸ್ಟ್ ಇನಿಂಗ್ಸೊಂದರಲ್ಲಿ ಅವರ ಶ್ರೇಷ್ಠ ಸಾಧನೆಯಾಗಿದೆ.
ಜಾನ್ಸನ್ರ ಮಾರಕ ವೇಗವನ್ನು ಎದುರಿಸಿದ ಶ್ರೀಲಂಕಾಗೆ ತನ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 42 ರನ್ಗಳನ್ನು ಗಳಿಸಲು ಸಾಧ್ಯವಾಯಿತು. ಅದು ಕೇವಲ 13.5 ಓವರ್ಗಳಲ್ಲಿ ಸರ್ವಪತನಗೊಂಡಿತು. ಪತುಮ್ ನಿಸ್ಸಂಕ (3), ದಿನೇಶ್ ಚಂಡಿಮಲ್ (0), ಆ್ಯಂಜೆಲೊ ಮ್ಯಾಥ್ಯೂಸ್ (1), ಧನಂಜಯ ಡಿ ಸಿಲ್ವ (7), ಪ್ರಭಾತ ಜಯಸೂರ್ಯ (0), ವಿಶ್ವ ಫೆರ್ನಾಂಡೊ (0) ಮತ್ತು ಅಸಿತ ಫೆರ್ನಾಂಡೊ (0) ಜಾನ್ಸನ್ರ ಬಲಿಪಶುಗಳಾದರು. ಅವರು ಮೈದಾನಕ್ಕೆ ಬಂದಷ್ಟೇ ವೇಗದಲ್ಲಿ ಹಿಂದಿರುಗಿದರು.
ಕಮಿಂಡು ಮೆಂಡಿಸ್ 20 ಎಸೆತಗಳಲ್ಲಿ 13 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರ್ದಾರರಾದರು.
ಶ್ರೀಲಂಕಾದ ಈವರೆಗಿನ ಟೆಸ್ಟ್ ಇನಿಂಗ್ಸೊಂದರ ಕನಿಷ್ಠ ಮೊತ್ತ 71 ಆಗಿತ್ತು. 1994ರಲ್ಲಿ ಪಾಕಿಸ್ತಾನದ ವಿರುದ್ಧ ಅದು ಈ ಮೊತ್ತವನ್ನು ದಾಖಲಿಸಿತ್ತು.
ಅದೂ ಅಲ್ಲದೆ, ದಕ್ಷಿಣ ಆಫ್ರಿಕ ವಿರುದ್ಧ ಯಾವುದೇ ತಂಡವೊಂದು ದಾಖಲಿಸಿದ ಕನಿಷ್ಠ ಮೊತ್ತವೂ ಇದಾಗಿದೆ. ಇದಕ್ಕೂ ಮುನ್ನ ಈ ದಾಖಲೆಯನ್ನು ನ್ಯೂಝಿಲ್ಯಾಂಡ್ ಹೊಂದಿತ್ತು. ಅದು 2013ರಲ್ಲಿ 45 ರನ್ ಗಳಿಸಿತ್ತು.
ಶ್ರೀಲಂಕಾವು ಕೇವಲ 85 ಎಸೆತಗಳಲ್ಲಿ ಆಲೌಟಾಯಿತು. ಇದು ತಂಡವೊಂದು ಆಲೌಟಾದ ಎರಡನೇ ಕನಿಷ್ಠ ಎಸೆತಗಳಾಗಿವೆ. ಮೊದಲ ಸ್ಥಾನದಲ್ಲಿ ದಕ್ಷಿಣ ಆಫ್ರಿಕ ಇದೆ. ಅದು 1924ರಲ್ಲಿ ಎಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ಇಂಗ್ಲೆಂಡ್ ವಿರುದ್ಧ ಕೇವಲ 75 ಎಸೆತಗಳಲ್ಲಿ ಆಲೌಟಾಗಿತ್ತು.
ದಕ್ಷಿಣ ಆಫ್ರಿಕವು ತನ್ನ ಮೊದಲ ಇನಿಂಗ್ಸ್ನಲ್ಲಿ 191 ರನ್ಗಳನ್ನು ಗಳಿಸಿತ್ತು. ಅದು ತನ್ನ ಎರಡನೇ ಇನಿಂಗ್ಸ್ನಲ್ಲಿ ಕೇವಲ 3 ವಿಕೆಟ್ಗಳನ್ನು ಕಳೆದುಕೊಂಡು 132 ರನ್ ಗಳಿಸಿದೆ. ಅದು ಈಗ ಒಟ್ಟಾರೆ 281 ರನ್ಗಳ ಮುನ್ನಡೆಯಲ್ಲಿದೆ.
ದಕ್ಷಿಣ ಆಫ್ರಿಕದ ಎರಡನೇ ಇನಿಂಗ್ಸ್ನಲ್ಲಿ ಏಡನ್ ಮರ್ಕ್ರಾಮ್ 47 ರನ್ಗಳ ಕೊಡುಗೆ ನೀಡಿದರು.