ಹೆಚ್ಚುವರಿ ಆಟಗಾರರಾಗಿ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಮ್ಯಾಥ್ಯೂಸ್, ಚಾಮೀರ ಸೇರ್ಪಡೆ
ಶ್ರೀಲಂಕಾ ಕ್ರಿಕೆಟ್ ತಂಡ | Photo: Twitter//@ICC
ಹೊಸದಿಲ್ಲಿ: ಹಿರಿಯ ಆಲ್ರೌಂಡರ್ ಆ್ಯಂಜೆಲೊ ಮ್ಯಾಥ್ಯೂಸ್ ಹಾಗೂ ವೇಗದ ಬೌಲರ್ ದುಶ್ಮಂತ ಚಾಮೀರ ಹೆಚ್ಚುವರಿ ಆಟಗಾರರ ರೂಪದಲ್ಲಿ ಶ್ರೀಲಂಕಾದ ವಿಶ್ವಕಪ್ ತಂಡವನ್ನು ಲಕ್ನೊದಲ್ಲಿ ಶುಕ್ರವಾರ ಸೇರಿಕೊಳ್ಳಲಿದ್ದಾರೆ ಎಂದು ಕ್ರಿಕೆಟ್ ಮಂಡಳಿಯು ಗುರುವಾರ ತಿಳಿಸಿದೆ.
ಮ್ಯಾಥ್ಯೂಸ್ ಹಾಗೂ ಚಾಮೀರ ಇಬ್ಬರೂ ಆಟಗಾರರು ಜೂನ್ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಕೊನೆಯ ಬಾರಿ ಏಕದಿನ ಸರಣಿಯನ್ನು ಆಡಿದ್ದರು.
36ರ ಹರೆಯದ ಮ್ಯಾಥ್ಯೂಸ್ 221 ಪಂದ್ಯಗಳನ್ನು ಆಡಿದ್ದು 6,000 ರನ್ ಗಳಿಸಿದ್ದಾರೆ. 120 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇತ್ತೀಚೆಗೆ ಅವರು ಬೌಲಿಂಗ್ ಮಾಡದೆ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. 31ರ ವಯಸ್ಸಿನ ಬಲಗೈ ವೇಗದ ಬೌಲರ್ ಚಾಮೀರ 44 ಏಕದಿನ ಪಂದ್ಯಗಳಲ್ಲಿ ಒಟ್ಟು 50 ವಿಕೆಟ್ಗಳನ್ನು ಪಡೆದಿದ್ದಾರೆ.
ಆ್ಯಂಜೆಲೊ ಮ್ಯಾಥ್ಯೂಸ್ ಹಾಗೂ ದುಶ್ಮಂತ ಚಾಮೀರ ಅವರು ಮೀಸಲು ಆಟಗಾರರಾಗಿ ಭಾರತದಲ್ಲಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಲು ಶ್ರೀಲಂಕಾ ಕ್ರಿಕೆಟ್ ಸಂತೋಷಪಡುತ್ತಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಶ್ರೀಲಂಕಾ ತಂಡ ಅಕ್ಟೋಬರ್ 21ರಂದು ಲಕ್ನೊದಲ್ಲಿ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಆಡಲಿದೆ.